“ಇದು ನಿರ್ಲಿಪ್ತ ಮನಸ್ಥಿತಿಯ ಅನಾವರಣದ ಕವಿತೆ. ನಿರಾಸಕ್ತ ಹೃದಯದ ರಿಂಗಣಗಳ ನಿರಾಕರಣೆ ಗೀತೆ. ನಾವು ಇಡುವ ಹೆಜ್ಜೆ, ಆಡುವ ಮಾತುಗಳ ಮೇಲಿನ ನಿಯಂತ್ರಣವೇ ನಮ್ಮ ಬದುಕು, ಬಂಧಗಳ ಹರಿವು, ಉಳಿವು, ಅಳಿವಿಗೆ ಕಾರಣ. ಅಸಂಖ್ಯ ಭಾವಗಳ ಈ ಕವಿತೆ ಆಳಕ್ಕಿಳಿದಷ್ಟೂ ವಿಸ್ತಾರವಿದೆ. ಅರ್ಥೈಸಿದಷ್ಟೂ ವಿಶಾಲವಿದೆ. ಏನಂತೀರಾ.?”
– ಪ್ರೀತಿಯಿಂದ ಎ.ಎನ್.ರಮೇಶ್, ಗುಬ್ಬಿ👇
ಅಸಂಭವ.!
ಮನಸು ಮುರಿದ ಮೇಲೆ
ಎಷ್ಟು ಕೂಗಿ ಕರೆದರೇನು
ಹೊರಳಿ ನೋಡಲಾದೀತೆ.?
ಮೆಟ್ಟಿಲು ಕಡಿದ ಮೇಲೆ
ಪೂರ್ಣ ಕದ ತೆರೆದರೇನು
ಮತ್ತೆ ಒಳಹೋಗಲಾದೀತೆ.?
ಕೊಂಡಿ ಕಳಚಿದ ಮೇಲೆ
ಅದೆಂತ ಬೆಸುಗೆ ಹಾಕಿದರೇನು
ಪುನಃ ಮೊದಲಿನಂತಾದೀತೆ.?
ನಂಜು ಕಾರಿದಾದ ಮೇಲೆ
ಅದೆಷ್ಟು ಅಮೃತ ಸುರಿದರೇನು
ಹಾಲಾಹಲ ಹಾಲಾದೀತೆ.?
ಬೆಂಕಿ ಉಗುಳಿದ ಮೇಲೆ
ಎಷ್ಟು ತಂಗಾಳಿ ಬೀಸಿದರೇನು
ಸುಟ್ಟಗಾಯದ ಕರೆ ಮಾಸೀತೆ.?
ಮಿಂಚಿಹೋದ ಕಾಲ ಬಂದೀತೆ.?
ಬಾಡಿಹೋದ ಬಂಧ ಮಾಲ
ಮರಳಿ ಮುದದಿ ನಳನಳಿಸೀತೆ.??
-ಎ.ಎನ್.ರಮೇಶ್, ಗುಬ್ಬಿ.
*****
👆ಶಾರದ ಕೊಪ್ಪಳ, ಸಂಗೀತ ಶಿಕ್ಷಕರು, ಹಗರಿಬೊಮ್ಮನಹಳ್ಳಿ