ಉಲ್ಲಾಸ
(ಭಾಮಿನಿ ಷಟ್ಪದಿಯಲ್ಲಿ)
ಊರ ಮುಂದಿನ ಜಲದಿ ಮಿಂದವು
ಭಾರಿ ಸಂತಸ ಪಟ್ಟು ನಲಿದವು
ಸೂರಬಯಸದ ಮಹಿಷವೃಂದವು ತಾಪ ಸಹಿಸದೆಯೆ|
ನೂರು ಜನರದು ಬಂದು ನಿಂತರು
ಬೇರೆಯಾವ ಲಕ್ಷ್ಯವ ಕಾಣದೆ
ಜೋರಿನಿಂದಲಿ ಮುಳುಗಿಯೇಳುತ ಸಗ್ಗ ಕಂಡಂತೆ||
ಮನುಜರೆಲ್ಲರು ನೋಡಿ ನಿಂದರು
ದಿನವ ನೂಕುತ ರಸ್ತೆ ಬದಿಯಲಿ
ಮನದಿಸಂತಸ ಪಟ್ಟುಕೊಂಡರು ಸುಖದ ಜೀವನವು|
ವನದ ಮಧ್ಯದ ಗುಂಡಿಯೊಳಗಡೆ
ಸನಿಹದೇವಳ ಚಂದಕಾಂಬುದು
ಮನಕೆಮುದವನು ನೀಡು ತಿರುವುದು ತುಸುವೆ ನೆಮ್ಮದಿಯು||
ಹಳ್ಳಿ ಬದುಕಿನ ಚಿತ್ರ ಕಾಣಲು
ಹೊಳ್ಳಿಹಿಂದಕೆ ಬಾಲ್ಯನೆನೆದೆನು
ಗಲ್ಲಿಗಲ್ಲಿಯ ತಿರುಗಿ ಬರುತಲಿ ಗೆಳೆಯರೊಡಗೂಡಿ|
ಅಲ್ಲೆತೋಟದಿ ಕಂಡ ದೃಶ್ಯವ
ನಿಲ್ಲಿಕಾಣಲು ಪುಳಕಗೊಳ್ಳುತ
ಮೆಲ್ಲ ತೆಗೆದೆನು ಪಟವ ನಗುತಲಿ ಭಾರಿ ಖುಷಿಯಿಂದ||
-ಧರಣೀಪ್ರಿಯೆ
ದಾವಣಗೆರೆ
*****