ಅಮ್ಮ(ವ್ವ)
ಪ್ರೀತಿ ಕವಲೊಡೆಯದ
ತಾವು,
ಅವ್ವನ ಮಡಿಲು..!!
ಅಕಾರಣ ಪ್ರೀತಿಯ
ಹುಡುಕ ಹೊರಟಿದ್ದೆ,
ನನ್ನವ್ವ ಎದುರಾದಳು..!!
ಸರಿ – ತಪ್ಪುಗಳಾಚೆಗೂ
ಪ್ರೀತಿಸಬಲ್ಲ ಒಂದು ಜೀವವಿದೆ,
ಅಮ್ಮ ಎಂದರೆ
ಅನಂತ ಪ್ರೀತಿಯ
ಖಾಯಂ ವಿಳಾಸ..!!
ಪ್ರೀತಿ;
ಅಮ್ಮ ಕಂದನದ್ದಷ್ಟೇ
ನಿರಂತರ..!!
ಸೋತೆ ಎಂದು ಕುಂತ ಪ್ರತೀಬಾರಿ
ಗಟ್ಟಿಗಿತ್ತಿ ಅಮ್ಮ ನೆನಪಾಗುತ್ತಾಳೆ!!
ಅಮ್ಮನಿಗೆ ದಣಿವೇ ಆಗದರೆಡೆ
ಸದಾ ನನಗೆ ಅಚ್ಚರಿಯಿದೆ..!!
ಕತ್ತಲೆಂದರೆ,
ಭಯವಿಲ್ಲ ನನಗೆ,
ನನ್ನಮ್ಮ ಬೆಳಕು..!!
ಯಾರೋ ಕೇಳಿದರು,
ದೇವರಿದ್ದಾನಾ?!
ಥಟ್ಟನೆ ಅಮ್ಮ ನೆನಪಾದಳು!!
ಹುಟ್ಟಿದ ಹಬ್ಬವೆಂದು
ಎಂದೂ ಸಂಭ್ರಮಿಸಲಾರೆ,
ಆ ದಿನ ಅಮ್ಮ,
ಸತ್ತು ಹುಟ್ಟಿರುತ್ತಾಳಲ್ಲ..!!
ಪ್ರೀತಿ ಎಂದೂ ಸೋಲುವುದಿಲ್ಲ,
ಪುರಾವೆ ಬೇಕೆಂದರೆ ಅಮ್ಮನನ್ನು ನೋಡಿ.
ಅಮ್ಮ ಅಂದ್ರೆ,
ದಣಿವರಿಯದ ಪ್ರೀತಿ..!!
ನನ್ನ ಆಕಾಶದಲ್ಲಿ ತಾರೆಗಳಿಲ್ಲವೆಂದು ನಾನೆಂದೂ ಕೊರಗುವುದಿಲ್ಲ,
ಅವ್ವ ನನ್ನ ಆಕಾಶ ಮತ್ತು ನಿತ್ಯ ಬೆಳದಿಂಗಳು..!!
~ ✍️ ವಿನುತಾ, ಬೆಂಗಳೂರು
*****