ಅನುದಿನ‌ ಕವನ-೩೬೩, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಬಳ್ಳಾರಿ, ಕವನದ ಶೀರ್ಷಿಕೆ: ನಮ್ಮ ಕುವೆಂಪು

🌹ಎಲ್ಲರಿಗೂ ಜಗದ ಕವಿ ಕುವೆಂಪು ಜನ್ಮದಿನದ ಶುಭಾಶಯಗಳು…..🌺
ಪದ್ಮ ವಿಭೂಷಣ ಕುವೆಂಪುರವರ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುವ ಈ ಶುಭ ಸಂದರ್ಭದಲ್ಲಿ ಕವಿ ಎ.ಎಂ.ಪಿ ವೀರೇಶಸ್ವಾಮಿ ಅವರ ನಮ್ಮ ಕುವೆಂಪು ಕವಿತೆ ಇಂದಿನ ‘ಅನುದಿನ‌ ಕವನ’ ದ ಗೌರವಕ್ಕೆ ಪಾತ್ರವಾಗಿದೆ…..👇🌹

ನಮ್ಮ ಕುವೆಂಪು

ಕನ್ನಡ ನುಡಿ ತೇರ ಕಟ್ಟಿದವರು
ಕನ್ನಡಕೆ ಜ್ಞಾನ ಪೀಠದ ಕಳಶವಿಟ್ಟವರು
ಕನ್ನಡಮ್ಮನ ರಥವ ಎಳೆದವರು
ಕನ್ನಡದ ರಥಶಿಲ್ಪಿ ನಮ್ಮಕುವೆಂಪು

ತಾಯ್ನೆಲದಲಿ ಮಾತೃಭಾಷೆ ಬಿತ್ತಿದವರು
ಅನ್ಯಭಾಷೆ ವ್ಯಾಮೋಹದ ಕಳೆಕಿತ್ತವರು
ಸಾಹಿತ್ಯ ಬೆಳೆಯನು ಸಮೃದ್ಧಿ ಗೊಳಿಸಿದವರು
ಕನ್ನಡಮ್ಮನ ನೇಗಿಲಯೋಗಿ ನಮ್ಮಕುವೆಂಪು

ಕಾವ್ಯ ಕೊಳಲಿನ ಗಾನ ನುಡಿಸಿದವರು
ರಾಮಾಯಣವ ದರ್ಶಿಸಿದ ದಾರ್ಶನಿಕರು
ಮಲೆನಾಡ ಮಧುಮಗಳ ಸಿಂಗರಿಸಿದವರು
ಕನ್ನಡದ ರಸ ಋಷಿ ರಾಷ್ಟ್ರ ಕವಿ ನಮ್ಮಕುವೆಂಪು

ಜಾತಿ ಮತದ ಹೊಟ್ಟ ತೂರಿದ ಮನುಜ ಮತದವರು
ಧರ್ಮ ತತ್ವದ ಎಲ್ಲೆ ಮೀರಿ ವಿಶ್ವಪಥ ತೋರಿದವರು
ಮೌಡ್ಯಮುರಿದು ವಿಚಾರ ಕ್ರಾಂತಿ ಆಹ್ವಾನಿಸಿದವರು
ಕನ್ನಡ ನಾಡೋಜ ಪದ್ಮಭೂಷಣ ನಮ್ಮ ಕುವೆಂಪು

ಯುಗದ ಕವಿಗೆ ಜಗದ ಕವಿಗೆ ಕರ್ಮಯೋಗಿಗೆ
ವಿಶ್ವಮಾನವನಿಗೆ ಬೆಳಗುವೆ ನುಡಿನಮನ ದೀವಿಗೆ.

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ, ಬಳ್ಳಾರಿ
*****