ಕರ್ನಾಟಕ ಕಹಳೆ ಡಾಟ್ ಕಾಮ್ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ ಒಂದು ವರ್ಷವಾಯಿತು. ಹಿರಿಯ ಸಾಹಿತಿ ಗಂಗಾಧರ ಪತ್ತಾರ ಅವರ ಕವಿತೆ ಮೂಲಕ ಪ್ರಾರಂಭಗೊಂಡ ಕಾವ್ಯಯಾತ್ರೆ ಹಿರಿಯ ಕವಿ ಮನಂ (ಎಂ. ನಂಜುಂಡಸ್ವಾಮಿ) ಅವರ ‘ನೀನು ಕೊಟ್ಟ ಅಂಗಿ’ ಇಂದು 365ನೇ ಕವಿತೆಯಾಗಿ ಪ್ರಕಟವಾಗುವ ಮೂಲಕ ಯಶಸ್ವಿಯಾಗಿ ಒಂದು ವರ್ಷ ಪೂರೈಸುತ್ತಿದೆ. ಈ ಯಶಸ್ಸಿಗೆ ನಾಡಿನ ಹಿರಿಯ, ಉದಯೋನ್ಮುಖ ಕವಿಗಳು, ಕವಯತ್ರಿಯರ ಸಹಕಾರ, ಬೆಂಬಲವೇ ಕಾರಣ….ಕವಿತೆಗಳನ್ನು ಪ್ರೀತಿಯಿಂದ ನೀಡಿದ ಕವಿ, ಕವಯತ್ರಿಯರು ಹಾಗೂ ಕಾವ್ಯ ರಸಿಕರಿಗೆ ಕರ್ನಾಟಕ ಕಹಳೆ ಡಾಟ್ ಕಾಮ್ ಪರವಾಗಿ ಕೃತಜ್ಞತೆಗಳು.
(ಸಂಪಾದಕರು) *****
ನೀನು ಕೊಟ್ಟ ಅಂಗಿ
ನೀನು ಎಂದೋ ಕೊಟ್ಟ ಅಂಗಿಯ
ತೊಟ್ಟೂ ತೊಟ್ಟೂ ಒಂತೊಟ್ಟೂ ಮಾಸಿಲ್ಲ
ಮೂಸಿದಾಗಲೇಲ್ಲಾ ನಿನ್ನ ನೆನಪಿನ
ಘಮ ಘಮವ ಹರಿಸುತ್ತಾ ನನ್ನ ಮೈಮನವ ಹೊಚ್ಚಿದೆ.
ನೀನು ಎಂದೋ ಕೊಟ್ಟ ಅಂಗಿಯ
ಮುಟ್ಟಿ ಮುಟ್ಟಿ ನೋಡಿದಾಗ ಮನಮುಟ್ಟುವ
ನೆನಪುಗಳ ತಟ್ಟಿ ತಟ್ಟಿ ಎಚ್ಚರಿಸುವ
ಕೋಟಿ ಕೋಟಿ ನನ್ನ ಕನಸುಗಳ ಕಟ್ಟುತ್ತಾಯಿದೆ.
ನೀನು ಎಂದೋ ಕೊಟ್ಟ ಅಂಗಿಯ
ತೊಡಲೋ ಇಲ್ಲಾ ಸುಮ್ಮನೆ ಜೋಡಿಸಿಡಲೋ
ಕದ ಮುಚ್ಚಿದ ಕಪಾಟಿನೊಳಗೆ ಎಂಬ ಯೋಚನೆಯಲ್ಲಿ
ಆಕಡೆ ಈಕಡೆ ವಾಲಿಸುತ್ತಾ ಮನವ ಜೋಕಾಲಿಯಾಗಿಸುತ್ತಿದೆ.
ನೀನು ಎಂದೋ ಕೊಟ್ಟ ಅಂಗಿಯ
ನನ್ನವರಿಗೆಲ್ಲಾ ತೋರುತ್ತಾ ನನ್ನ ಕಾವ್ಯಕನ್ನಿಕೆ
ನನಗಾಗಿ ನೀಡಿದ ಒಲವಿನ ಸುಂದರ ಕಾಣಿಕೆ
ಎಂದು ಹೇಳಿಕೊಳ್ಳುವ ಸಂತೋಷವ ಹೆಚ್ಚಿಸುತ್ತಿದೆ.
– ಮನಂ, ಬೆಂಗಳೂರು
*****