ಶಿಕ್ಷಣ ಲೋಕದ ಅದಮ್ಯ ಚೇತನ ಸಾವಿತ್ರಿ ಬಾಯಿ ಫುಲೆ -ಭಾರತಿ ಕೇದಾರ ನಲವಡೆ

ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ‌ಫುಲೆ ಅವರ ೧೯೧ ನೇ ಜಯಂತೋತ್ಸವದ ಸಂದರ್ಭದಲ್ಲಿ ಕರ್ನಾಟಕ ಕಹಳೆ‌ ಡಾಟ್ ಕಾಮ್ ಗೌರವ ನಮನಗಳನ್ನು ಸಲ್ಲಿಸುತ್ತದೆ. ಹಳಿಯಾಳದ ಅಧ್ಯಾಪಕಿ ಭಾರತಿ ಕೇದಾರ ನಲವಡೆ ಅವರು ‘ಮಹಾ ತಾಯಿ ಸಾವಿತ್ರಿ ಬಾಯಿ ಫುಲೆ’ ಅವರ ಕುರಿತು ಬರೆದ ಲೇಖನವನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಕರ್ನಾಟಕ ಕಹಳೆ ಪ್ರಕಟಿಸುತ್ತಿದೆ.
(ಸಂಪಾದಕರು)
👇

ಶಿಕ್ಷಣ ಲೋಕದ ಅದಮ್ಯ ಚೇತನ ಸಾವಿತ್ರಿ ಬಾಯಿ ಫುಲೆ

“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ”ಎಂಬ ಮಾತು ಅಕ್ಷರಶಃ ಸತ್ಯ. ಇದನ್ನು ನಿಜವಾಗಿಸಿ ಸಾಕ್ಷರತೆ ಸಮಾನತೆ ಕ್ರಾಂತಿಯ ಕಹಳೆ ಊದಿದ ಧೀಮಂತ ಮಹಿಳೆ ಸಾವಿತ್ರಿಬಾಯಿ ಫುಲೆ.
೧೮೩೧ರ ಜನೆವರಿ ೩ ರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಜನಿಸಿದರು. ಅಂದಿನ ಸಮಾಜದ ಪರಿಪಾಠದಂತೆ ೧೨ವರ್ಷದ ಜ್ಯೋತಿಬಾಫುಲೆ ಅವರೊಂದಿಗೆ ೯ವರ್ಷದ ಸಾವಿತ್ರಿಬಾಯಿಯವರ ಬಾಲ್ಯವಿವಾಹ ನಡೆಯಿತು. ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷನಿರುತ್ತಾನೆ ಎಂಬಂತೆ ಸಮಾಜ ಸುಧಾರಕ ಪತಿ ಜ್ಯೋತಿಬಾಫುಲೆ ಸಾವಿತ್ರಿಬಾಯಿಯವರಿಗೆ ಅಕ್ಷರಾಭ್ಯಾಸ ಮಾಡಿಸಿ ಅವರ ವ್ಯಕ್ತಿತ್ವವನ್ನೇ ಬದಲಾಯಿಸಿದರು. ಅವರನ್ನು ಸಮಾಜಮುಖಿ ಕಾರ್ಯದಲ್ಲಿ ತೊಡಗಲು ಪ್ರೇರಣೆ ನೀಡಿದರು.
೧೯ನೇ ಶತಮಾನದಲ್ಲಿ ಎಲ್ಲ ತಳ ಸಮುದಾಯಗಳ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಂದಿನ ಜಾತಿ ಮನಸ್ಥಿತಿಯ ಮೌಢ್ಯಕ್ಕೆ ಒಳಗಾದ ತಳ ಸಮುದಾಯಗಳ ಜನ ನಿರಾಕರಿಸಿದರು. ಇದನ್ನು ಒಂದು ಸವಾಲಿನಂತೆ ಸ್ವೀಕರಿಸಿ ಅಕ್ಷರದವ್ವಸಾವಿತ್ರಿಬಾಯಿಯವರು ಹೋರಾಟ ಮಾಡಿ ೧೮೪೮ರಲ್ಲಿ ಪುಣೆಯ ನಾರಾಯಣ ಪೇಟೆಯ ಬಿಂದೇವಾಡದಲ್ಲಿ ಮೊಟ್ಟಮೊದಲು ಬಾಲಕಿಯರ ಶಾಲೆ ತೆರೆದರು.
ಸಾವಿತ್ರಿಬಾಯಿಯವರ ಈ ಕಾರ್ಯವನ್ನು ಗಮನಿಸಿದ ಅತಾರ್ಕಿಕ ಜಾತಿ ಮನಸ್ಥಿತಿಗೆ ಜೋತುಬಿದ್ದ ಮಗಳು ಹೇಗಾದರೂ ಮಾಡಿ ಸಾವಿತ್ರಿಬಾಯಿ ಈ ಕೆಲಸದಿಂದ ಹಿಮ್ಮೆಟ್ಟುವಂತೆ ಮಾಡಲು, ಶಾಲೆಗೆ ಹೋಗುವಾಗ ಆಕೆಯ ಮೇಲೆ ಸಗಣಿ ಎರಚಲಾಯಿತು. ಹೀನಾಯವಾಗಿ ಬಯ್ಯಲಾಯಿತು, ಕಲ್ಲು ಎಸೆದು ಸಮಾಜದ್ರೋಹಿ ಪಟ್ಟ ಕಟ್ಟಲಾಯಿತು. ಇದಕ್ಕೆ ಜಗ್ಗದ ಬಗ್ಗದ ಸಾವಿತ್ರಿಬಾಯಿ ತಾಳ್ಮೆಯಿಂದ ಇದ್ದು ತನ್ನ ಛಲ ಬಿಡದೇ ಮುಂದುವರೆದರು. ಶಾಲೆಗೆ ಬರುವಾಗ ತನ್ನ ಚೀಲದಲ್ಲಿ ಒಂದು ಸೀರೆ ಇಟ್ಟುಕೊಂಡು ಬರುತ್ತಿದ್ದರು. ಬರುವಾಗ ಸಗಣಿ, ಕೆಸರು ಎರಚಿದ ಸೀರೆಯನ್ನು ವಿದ್ಯಾರ್ಥಿಗಳು ಬರುವುದಕ್ಕೂ ಮುನ್ನ ಶಾಲೆಯಲ್ಲಿ ಬದಲಿಸಿ ಪಾಠಕ್ಕೆ ಅಣಿಯಾಗುತ್ತಿದ್ದರು.
೧೮೪೮ರಿಂದ೧೮೫೨ರ ವರೆಗೆ ಅವರು ನಡೆಸುತ್ತಿದ್ದ ಶಾಲೆಗಳ ಸಂಖ್ಯೆ ೧೮ಕ್ಕೆ ಬಂದು ತಲುಪಿ ಒಟ್ಟು ೫೦೦ ವಿದ್ಯಾರ್ಥಿಗಳು ಕಲಿಯಲು ಅವಕಾಶ ದೊರೆಯಿತು. ಇದರ ಜೊತೆಗೆ ಸಾವಿತ್ರಿಬಾಯಿಯವರು ಬಾಲ್ಯವಿವಾಹವಾಗಿ ವಿಧವೆಯಾದ, ಅತ್ಯಾಚಾರಕ್ಕೊಳಗಾದ ನೊಂದ ಹೆಣ್ಣು ಮಕ್ಕಳಿಗೆ ಅಬಲಾಶ್ರಮಗಳನ್ನು ನಿರ್ಮಿಸಿದರು. ಕೂಲಿಕಾರರಿಗಾಗಿ ರಾತ್ರಿ ಪಾಳಿಯ ಶಾಲೆ ಆರಂಭಿಸಿದರು. ಬ್ರಿಟಿಷ ಸರ್ಕಾರ ಅವರ ಈ ಕಾರ್ಯಗಳನ್ನು ಮೆಚ್ಚಿ ಭಾರತದ ಮೊದಲ ಶಿಕ್ಷಕಿ ಎಂಬ ಮನ್ನಣೆ ನೀಡಿತು. ಸತ್ಯ ಶೋಧಕ ಸಮಾಜದ ಅಧ್ಯಕ್ಷೆಯಾಗಿ ಪೂಜಾರಿಗಳಿಲ್ಲದೆ ಮದುವೆಗಳನ್ನು ನಡೆಸಿದರು.
ಸಾವಿತ್ರಿಬಾಯಿ ಒಬ್ಬ ದಯಾಮಯಳಾದ ಶಿಕ್ಷಕಿ, ಸಮಾಜ ಸುಧಾರಕ, ಮಹಿಳಾ ಸಮಾನತೆಯ ಹೋರಾಟಗಾರ್ತಿ ಮಾತ್ರವಲ್ಲದೇ ಒಬ್ಬ ಶ್ರೇಷ್ಠ ಸಾಹಿತಿ ಕೂಡ ಆಗಿದ್ದರು. ೧೮೫೪ರಲ್ಲಿ ‘ಕಾವ್ಯ ಅರಳಿದೆ’ಎಂಬ ಕವನಸಂಕಲನ ೧೯ನೇ ಶತಮಾನದ ಸಾಮಾಜಿಕ ಸ್ಥಿತಿಯನ್ನು ಬಿಚ್ಚಿಡುತ್ತದೆ. ೧೮೯೧ರಲ್ಲಿ ಭವನಕಾಶಿ, ಸುಭೋದ ರತ್ನಾಕರ(ಅಪ್ಪಟ ಮುತ್ತುಗಳ ಸಾಗರ) ಎಂಬ ಜ್ಯೋತಿಬಾಫುಲೆ ಫುಲೆಯವರ ಕುರಿತ ಆತ್ಮಕಥೆಯನ್ನು ಬರೆದಿದ್ದಾರೆ. ೧೮೯೨ರಲ್ಲಿ ಜ್ಯೋತಿಬಾರವರ ಭಾಷಣಗಳ ಕೃತಿಯನ್ನು ಸಂಪಾದಿಸಿದ್ದಾರೆ.
೧೮೯೭ರಲ್ಲಿ ಮಹಾರಾಷ್ಟ್ರದ ಪುಣೆ ನಗರದಲ್ಲಿ ಪ್ಲೇಗ್ ರೋಗ ವ್ಯಾಪಕವಾಗಿ ಹರಡಿತು. ಈ ಸಂದರ್ಭದಲ್ಲಿ ಸಾವಿತ್ರಿಬಾಯಿಯವರು ಮನೆ ಮನೆಗೆ ಹೋಗಿ ರೋಗಿಗಳ ಆರೈಕೆ ಮಾಡುವಾಗ ಅವರಿಗೂ ಸೋಂಕು ತಗುಲಿ ಗುಣವಾಗದೇ ೧೦ ಮಾರ್ಚ ೧೮೯೭ ರಲ್ಲಿ ವಿಧಿವಶರಾದರು. ದೀನ ದಲಿತರ, ಅಕ್ಷರಲೋಕದ ನಂದಾದೀಪ ನಂದಿ ಹೋಯಿತು.
“ನಮಗೆ ವಿದ್ಯೆ ನೀಡಿ, ಒಗ್ಗಟ್ಟಿನ ಹೋರಾಟ ಕಲಿಸಿದರೆ ಎಂತಹ ಕಷ್ಟ ಎದುರಾದರೂ… ಎಲ್ಲರೂ ಒಗ್ಗೂಡಿ ಹೋರಾಡಿ ನಮ್ಮ ಬದುಕಿನ ದಾರಿ ನಾವೇ ಹುಡುಕಿಕೊಳ್ಳುವದನ್ನು ವಿದ್ಯೆ ಹೇಳಿಕೊಡುತ್ತದೆ”.
ಎಂಬ ಅಕ್ಷರ ಮಾತೆಯ ನುಡಿಗಳು ಸ್ವಾಭಿಮಾನ, ಸ್ವಾವಲಂಬನೆಗೆ ಕೆಚ್ಚನ್ನು ಮೂಡಿಸುತ್ತದೆ.
ಹೀಗೆ ಅಕ್ಷರದಲ್ಲಿ ಅನಿಷ್ಟಗಳ ವಿರುದ್ಧ ಸೆಟೆದು ನಿಂತು ಸಮಾಜದ ತಳ ಸ್ತರದ ವ್ಯಕ್ತಿಯ ಬಗೆಗಿನ ಕಾಳಜಿ ನಮ್ಮೆಲ್ಲರಲ್ಲಿ ಮಕ್ಕಳಲ್ಲಿ, ಇಂದಿನ ಯುವಜನತೆಯಲ್ಲಿ ಜಾಗೃತಿಯನ್ನು ಮೂಡಿಸಿ ಅನುಷ್ಠಾನದ ಅರಿವು ಮೂಡಬೇಕು ಎಂಬುದೇ ಈ ಜನ್ಮದಿನದ ಮಹದಾಸೆ, ಹಾಗೂ ಈ ಮಹಾತಾಯಿಯ ಅಕ್ಷರಕ್ರಾಂತಿ,ತ್ಯಾಗ,ನಿಸ್ವಾರ್ಥತೆ ಸಮಾನತೆಗೆ ನಾವೆಲ್ಲ ಸಲ್ಲಿಸಬಹುದಾದ ಅರ್ಥಪೂರ್ಣವಾದ ಗೌರವವಾಗಿದೆ ಅಲ್ಲವೇ?

-ಭಾರತಿ ಕೇದಾರಿ ನಲವಡೆ
ಅಧ್ಯಾಪಕರು,
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಮಂಗಳವಾಡ, ಹಳಿಯಾಳ
*****