ಬಳ್ಳಾರಿ, ಜ.6: ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಎಚ್ ಎಲ್ ಸಿ ಕಾಲುವೆಗೆ ಮಾ.31ರವರೆಗೆ ನೀರು ಹರಿಸಬೇಕು ಎಂದು ತುಂಗಭದ್ರಾ ರೈತ ಸಂಘ ಒತ್ತಾಯಿಸಿದೆ.
ನಗರದಲ್ಲಿ ಗುರುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಂಗಭದ್ರಾ ರೈತ ಸಂಘದ ಸಂಸ್ಥಾಪಕ ಅದ್ಯಕ್ಷ ದರೂರು ಪುರುಷೋತ್ತಮ ಗೌಡ ಅವರು, ಸಂಘದ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಪ್ರತಿಭಟನೆಯ ಹಾದಿ ತುಳಿಯ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇತ್ತೀಚೆಗೆ ನಡೆದ ಐಸಿಸಿ ಸಭೆಯಲ್ಲಿ ಎಚ್ ಎಲ್ ಸಿ ಕಾಲುವೆಗೆ ಮಾ.10ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ರೈತರ ಹಿತದೃಷ್ಟಿಯಿಂದ ಮಾ.31ರ ವರೆಗೆ ನೀರು ಹರಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರಿಗೆ ನೀರು ಹರಿಸುವ ವಿಚಾರದಲ್ಲಿ ಆಂದ್ರದ ಅಧಿಕಾರಿಗಳಿಗೆ ಹೋಲಿಸಿದರೆ ರಾಜ್ಯದ ಅದಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಮ್ಮ ಅದಿಕಾರಿಗಳಿಗೆ ರೈತರ ಹಿತಕ್ಕಿಂತ ತಮ್ಮ ಅನುಕೂಲಕ್ಕಾಗಿ ಹೆಚ್ಚು ಶ್ರಮಿಸುತ್ತಿದ್ದಾರೆ ಎಂದು ದೂರಿದರು..
ಅಧಿಕಾರಿಗಳಿಗೆ ಕಾಲುವೆ ಕಾಮಗಾರಿಗಳ ಮೆಲೆ ಹೆಚ್ಚು ಕಣ್ಣು, ಹೊರತು ರೈತರ ಅಭಿವೃದ್ಧಿ ಬೇಕಿಲ್ಲ ಎಂದು ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು.
ಉಭಯ ಜಿಲ್ಲೆಯ ನಾಗರಿಕರಿಗೆ ಶುದ್ದ ಕುಡಿವ ನೀರು ಸರಬರಾಜು ಮಾಡುವ ಕರೆಗಳಲ್ಲಿ ನೀರು ಸಂಗ್ರಹಿಸಲಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಈಗಿನಿಂದಲೇ ನೀರನ್ನು ಸಂಗ್ರಹಿಸಲು ಮುಂದಾಗಬೇಕು ಎಂದು ಪುರುಷೋತ್ತಮ ಗೌಡ ಒತ್ತಾಯಿಸಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಪಡೆಯಲು ಮುಂದಾಗಬೇಕು, ಬಹುತೇಕ ರೈತರು ಯೋಜನೆಯಡಿ ತಮ್ಮ ಹೆಸರನ್ನು ನೊಂದಾಯಿಸಲು ಮುಂದಾಗುತ್ತಿಲ್ಲ, ತಪ್ಪದೇ ರೈತರು ಹೆಸರನ್ನು ನೊಂದಾಯಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಹೂಳಿನ ಜಾತ್ರೆ: ಪ್ರಸಕ್ತ ವರ್ಷವೂ ತುಂಗಭದ್ರಾ ಹೂಳಿನ ಜಾತ್ರೆಯನ್ನು ಆಯೋಜಿಸಿ ಸರ್ಕಾರದ ಗಮನಸೆಳೆಯಲಾಗುವುದು. ಬರುವ ಮಾರ್ಚ್ ಅಥವಾ ಮೇ ತಿಂಗಳಲ್ಲಿ ಬಳ್ಳಾರಿ ಅಥವಾ ಹೊಸಪೇಟೆಯಲ್ಲಿ ಹೂಳಿನ ಜಾತ್ರೆಯನ್ನು ಹಮ್ಮಿಕೊಳ್ಳಲಾಗುವುದು. ಎಂದರು.
ರೈತರಿಗೆ ಆಗುತ್ತಿರುವ ಅನ್ಯಾಯ, ಹಾಗೂ ಜಲಾಶಯದಲ್ಲಿ ಹೂಳು ತೆರವುಗೊಳಿಸಿದರೆ ಆಗುವ ಅನುಕೂಲತೆಗಳ ಬಗ್ಗೆ ತಿಳಿಸಲಾಗುವುದು.
ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಗೊಂಡ ಹೂಳು ತೆರವುಗೊಳಿಸುವಂತೆ ಒತ್ತಾಯಿಸಿ ಸಾಕಷ್ಟು ಬಾರಿ ಗಮನಸೆಳೆಯಲಾಗಿದೆ. ಜಲಾಶಯದಲ್ಲಿ ಹೂಳೆತ್ತುವ ಮೂಲಕ ಸರ್ಕಾರದ ಗಮನಸೆಳೆದರೂ ಇಲ್ಲಿವರೆಗೆ ಕ್ರಮವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಿ.ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುವುದು, ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಆಂದ್ರ ಹಾಗೂ ತೆಲಂಗಾಣ ರಾಜ್ಯದ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಇದರ ಜೊತೆಗೆ ರಾಜ್ಯದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜ್ಯದ ಎಲ್ಲ ರೈತಪರ ಸಂಘಟನೆಗಳು, ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳನ್ನು ಹೂಳಿನ ಜಾತ್ರೆಗೆ ಆಹ್ವಾನಿಸಲಾಗುವುದು. ವಿಶೇಷವಾಗಿ ವಿವಿಧ ಮಠಗಳ ಸ್ವಾಮೀಜಿ ಗಳನ್ನು ಆಹ್ವಾನಿಸಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಗಂಗಾವತಿ ವಿರೇಶ್, ಬಸವರಾಜ್, ವೀರನಗೌಡ ಶ್ರೀಧರಗಡ್ಡೆ, ಪಂಪಾಪತಿ ಎಲಿಗಾರ್ ಕುಡುತಿನಿ, ಗೋವಿಂದಪ್ಪ ಕೊಂಚಗೇರಿ, ಶರಣಪ್ಪ, ಶಿವಯ್ಯ ಕೃಷ್ಣಾನಗರ ಕ್ಯಾಂಪ್ ಸೇರಿದಂತೆ ಇತರರಿದ್ದರು.
*****