ವಿಜಯಪುರ, ಜ. 07 : ರಾಜ್ಯದ ಎಕೈಕ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿವಿಯನ್ನು ಮುಚ್ಚುವ ಷಡ್ಯಂತ್ರ ಅತ್ಯಂತ ಆತಂಕಕಾರಿ ಮತ್ತು ಖಂಡನೀಯ ಎಂದು ಹೋರಾಟಗಾರ ಹಾಗೂ ನ್ಯಾಯವಾದಿ ಶ್ರೀನಾಥ್ ಪೂಜಾರಿ ಅವರು ಟೀಕಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಭಾಗದ ಮಹಿಳೆಯರ ಶಿಕ್ಷಣ ಗುಣಮಟ್ಟ ಹಾಗೂ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಂಜುಂಡಪ್ಪ ವರದಿಯ ಆಧಾರದ ಮೇಲೆ ವಿವಿ ಸ್ಥಾಪಿತವಾಗಿದ್ದು ಇದನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಹೇಳಿದರು.
ಕೂಡಲೇ ಸರಕಾರ ಈ ಅವೈಜ್ಞಾನಿಕ ಆಲೋಚನೆಯನ್ನು ಕೈ ಬಿಡಬೇಕು, ಸರಕಾರಕ್ಕೆ ವಿಜಯಪುರ ಜಿಲ್ಲೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶವಿದ್ದರೆ ಈ ಮಹಿಳಾ ವಿಶ್ವವಿದ್ಯಾಲಯ ಮುಚ್ಚದೆ ಮತ್ತೊಂದು ವಿಶ್ವವಿದ್ಯಾಲಯ ಪ್ರಾರಂಭಿಸಿ ಈ ಭಾಗದ ಮಹಿಳೆಯರ ಶಿಕ್ಷಣಕ್ಕೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಬಿಜೆಪಿ ಸರಕಾರ ಹಾಗೂ ಜನ ಪ್ರತಿನಿಧಿಗಳು ಸೇರಿಕೊಂಡು ಮಹಿಳಾ ವಿಶ್ವವಿದ್ಯಾಲಯದ ಮೂಲ ಆಶಯಗಳಿಗೆ ಧಕ್ಕೆ ತರುವ ಹುನ್ನಾರ ನಡೆಸಿರುವುದನ್ನು ಪೂಜಾರಿ ಟೀಕಿಸಿದರು ಅವರು ವಿಶ್ವ ವಿದ್ಯಾಲಯ ಮುಚ್ಚುವ ರಾಜ್ಯ ಸರ್ಕಾರದ ಈ ನಡೆ ಮಹಿಳಾ ವಿರೋಧಿ ನಡೆಯಾಗಿದೆ ಎಂದರು.
ಒಂದು ವೇಳೆ ಸರ್ಕಾರ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಮೂಲ ಆಶಯಗಳಿಗೆ ಧಕ್ಕೆ ತರುವ, ಮುಚ್ಚಲು ಅಥವಾ ಮೂಲ ಆಶಯಗಳನ್ನು ಬದಲಾಯಿಸಲು ಪ್ರಯತ್ನ ಪಟ್ಟರೆ ಈ ಭಾಗದ ಹಾಗೂ ನಾಡಿನ ಮಹಿಳೆಯರ ಪರವಾಗಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ, ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಹಾಜಿಮನಿ, ನಗರ ಘಟಕದ ಅಧ್ಯಕ್ಷ ಆನಂದ ಮುದೂರ ಉಪಸ್ಥಿತರಿದ್ದರು.
*****