ಅನುದಿನ‌ಕವನ-೩೭೫, ಕವಿ:ಚಂದ್ರಶೇಖರ ಪಾಟೀಲ(ಚಂಪಾ), ಕವನದ ಶೀರ್ಷಿಕೆ: ಸತ್ತವರು ಎಲ್ಲಿಗೆ ಹೋಗುತ್ತಾರೆ?

ಪ್ರೀತಿ ಇಲ್ಲದೇ ನಾನು ಏನನ್ನೂ ಮಾಡಲಾರೆ, ದ್ವೇಷವನ್ನೂ ಕೂಡ’
*ಕನ್ನಡ…ಕನ್ನಡ…ಬರ್ರಿ ನಮ್ಮ ಸಂಗಡ’ ಎಂದು ತಮ್ಮ ಕಾವ್ಯದಲ್ಲಿ ಒಡಮೂಡಿಸಿದ ಚಂಪಾ ಕಾವ್ಯನಾಮದ, ಪ್ರಸಿದ್ಧ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಸೋಮವಾರ ಬೆಳಿಗ್ಗೆ ಇಹ ಲೋಕ ತ್ಯಜಿಸಿದ್ದಾರೆ.
ಕನ್ನಡ ಸಾಹಿತ್ಯದ ಬೆಳವಣಿಗೆ, ಜನಪರ, ಕನ್ನಡಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದ ಪ್ರೊ.ಚಂಪಾ ಅವರ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ.

1986 ರಲ್ಲಿ ಪ್ರೊ. ಚಂಪಾ ಅವರು ಬರೆದ ‘ಸತ್ತವರು ಎಲ್ಲಿ ಹೋಗುತ್ತಾರೆ?’ ಎಂಬ ಕವಿತೆಯನ್ನು ಇಂದಿನ ‘ಅನುದಿನ‌ ಕವನ’ ಕಾಲಂ ನಲ್ಲಿ ಪ್ರಕಟಿಸುವ ಮೂಲಕ ಹಿರಿಯ ಸಾಹಿತಿ, ಹೋರಾಟಗಾರರಿಗೆ ಕರ್ನಾಟಕ‌ಕಹಳೆ ಡಾಟ್ ಕಾಮ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ.👇

ಸತ್ತವರು ಎಲ್ಲಿ ಹೋಗುತ್ತಾರೆ?

ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ…
ಇದ್ದವರ ನೆನಪಿನ ಗುದ್ದಿನಲ್ಲಿ
ಗುದ್ದಲಿಯಾಗುತ್ತಾರೆ.
ಅವರ ಶ್ವಾಸೋಚ್ಛ್ವಾಸದ ಹಳ್ಳ ಕೊಳ್ಳಗಳಲ್ಲಿ
ಹಾವಾಗಿ ಹರಿದಾಡುತ್ತಾರೆ.
ಅವರ ಆಕಾಶದ ತುಂಬ
ಹುಡಿಯಾಗಿ ಅಡರುತ್ತಾರೆ.
ಹಕ್ಕಿಯಾಗಿ ರೆಕ್ಕೆ ಬಿಚ್ಚುತ್ತಾರೆ.
ಚಿಕ್ಕೆಯಾಗಿ ಚಿಮುಕುತ್ತಾರೆ.
ಎಲ್ಲಿಯ ತನಕ?
ಇದ್ದವರು ಸಾಯುವ ತನಕ.
ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ…

-ಚಂದ್ರಶೇಖರ ಪಾಟೀಲ(ಚಂಪಾ)
*****