ಹೊಸಪೇಟೆ, ಜ. 13(ವಿಜಯನಗರ): ಹಂಪಿ ಸಮೀಪದ ಆರೆಂಜ್ ಕೌಂಟಿ(ಎವಲ್ವೋ ಬ್ಯಾಕ್) ಐಷಾರಾಮಿ ಹೊಟೇಲ್ ನಲ್ಲಿ ಬುಧವಾರ 18 ಸೇರಿ ಒಟ್ಟು 28 ಕೊವೀಡ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಿಳಿಸಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಹೊಟೇಲ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ತುಂಬಾ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ವೈಕುಂಠ ಏಕದಾಶಿ ಮತ್ತು ಮಕರ ಸಂಕ್ರಾಂತಿ ಹಿನ್ನೆಲೆ ಹಂಪಿಯಲ್ಲಿ ಹೆಚ್ಚಿನ ಜನರು ಸೇರುತ್ತಾರೆ ಎನ್ನುವ ಕಾರಣಕ್ಕಾಗಿ ಜ.13ರಿಂದ 17ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಂಪಿಯಲ್ಲಿರುವ ಎಲ್ಲಾ ಸ್ಮಾರಕಗಳು ವೀಕ್ಷಣಗೆ ಅವಕಾಶ ನೀಡದಂತೆ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ವ್ಯಾಪಕವಾಗಿ ಕೋವಿಡ್ ಹರಡಿರುವ ಬಗ್ಗೆ ಪ್ರಕರಣಗಳು ವರದಿಯಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲೆಗಳನ್ನು ಬಂದ್ ಮಾಡುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಡಿಸಿ ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಆಕ್ಸಿಜನ್ ಸಮರ್ಪಕ ಸಂಗ್ರಹ: ಕೋವಿಡ್ ಸೊಂಕಿತರ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ ಸಮರ್ಪಕ ಪ್ರಮಾಣದಲ್ಲಿ ಆಕ್ಸಿಜನ್ ಸಂಗ್ರಹಿಸಿಡಲಾಗಿದೆ. ಅಗತ್ಯ ಆಕ್ಸಿಜನ್ ಪ್ರಮಾಣ ಹೆಚ್ಚಿಸುವುದರ ಜೊತೆಗೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ,ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಬೆಡ್‍ಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗುತ್ತಿದೆ ಎಂದು ಅನಿರುದ್ಧ ಶ್ರವಣ್ ಅವರು ತಿಳಿಸಿದರು.
ಸೊಂಕಿತರು ಹೊರಗಡೆ ಓಡಾಡಬಾರದು ಮತ್ತು ಸುತ್ತಮುತ್ತಲಿನವರಿಗೂ ಆ ಕಡೆ ಸುಳಿಯಬಾರದು ಎನ್ನುವ ದೃಷ್ಟಿಯಿಂದ ಇವರ ಮನೆಗೆ ಪೋಸ್ಟರ್ ಗಳನ್ನು ಅಂಟಿಸಲಾಗುತ್ತಿದೆ.ಎಂದರು.
ಹೋಂ ಐಸೋಲೇಶನ್ ಒಳಗಾಗುವವರಿಗೆ ಆರೋಗ್ಯ ಕಿಟ್ ನೀಡಲಾಗುತ್ತಿದ್ದು, ಈಗಾಗಲೇ ರಚಿಸಲಾಗಿರುವ ಆರ್‍ಆರ್‍ಟಿ ತಂಡಗಳು ಸೊಂಕಿತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುತ್ತಿವೆ ಮತ್ತು ಆರೋಗ್ಯ ವಿಷಮಿಸಿದಲ್ಲಿ ಆಸ್ಪತ್ರೆಗೆ ದಾಖಲಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಗ್ರಾಪಂ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆಗಳು ವಾರಂತ್ಯ ಕರ್ಫೂ ಜಾರಿ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವಿಕೆ ಸೇರಿದಂತೆ ಇನ್ನಿತರ ಕೋವಿಡ್ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ ಎಂದರು.
ಡಿಎಚ್‍ಒ ಡಾ.ಜನಾರ್ಧನ್ ಅವರು ಇದ್ದರು.
***** (Hotel PC:Shivashankar Banagar)