“ಸಂಕ್ರಮಣದ ಶುಭಕಾಮನೆಗಳೊಂದಿಗೆ ಕಾವ್ಯಪ್ರಣತೆ ಒಪ್ಪಿಸಿಕೊಳ್ಳಿ.. ಕಳೆದೆರಡು ವರ್ಷಗಳಿಂದ ಕಂಗೆಟ್ಟ ಸಕಲ ಜೀವಗಳ ಕವಿತೆಯಿದು. ದಿನಮಾನ ಬದಲಾಗಿ ಜನಮಾನ ನಲಿವಿನಿಂದ ಝೇಂಕರಿಸಲಿ ಎಂಬ ನಿವೇದನೆಯ ಭಾವಪ್ರಣತೆಯಿದು. ಬದುಕಿನ ಬಣ್ಣಗಳು ಮತ್ತೆ ಮರುಕಳಿಸಲಿ, ಭುವನದ ಸುಗ್ಗಿ ಸುಭಿಕ್ಷೆಯ ಸ್ವರಗಳು ನಿತ್ಯ ಮಾರ್ದನಿಸಲಿ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.🌺👇
ಸಂಕ್ರಾಂತಿಗೊಂದು ವಿನಂತಿ.!
ಇಂದು ಸೂರ್ಯನೂ ಬದಲಿಸುತಿಹ ದಿಕ್ಕು.
ಇಂದಿನಿಂದ ಇನ್ನಾದರೂ ಈ ವರ್ಷವಾದರೂ
ಅಂತ್ಯವಾಗಲಿ ಸಕಲರ ನೋವುಗಳ ಬಿಕ್ಕು
ಕಳೆಯಲಿ ಆತಂಕ ಅಭದ್ರತೆ ಆಪತ್ತಿನ ಸುಕ್ಕು.!
ಶಾಶ್ವತವಾಗಲಿ ಸುರಕ್ಷಿತ ಬದುಕಿನ ಹಕ್ಕು.!
ಕಳೆದೆರಡು ವರ್ಷಗಳ ಕರಿ ತೊಳೆದು ಕಹಿ ಕಳೆದು
ಪ್ರತಿಜೀವ ಭಾವಗಳಿಗೆ ಬಳುವಳಿಯಾಗಲಿ ಬೆಲ್ಲ
ಕ್ಷಣ ಕ್ಷಣವು ನವೋತ್ಸಾಹದಿ ಅರಳಲಿ ಮೆಲ್ಲ ಮೆಲ್ಲ
ದುಃಖದುಮ್ಮಾನ ಸಾವುನೋವುಗಳ ಸರಣಿ ಹರಿದು
ಸುಖ ಸಮೃದ್ದಿಗಳಿಂದ ಅರಳಲಿ ಇಳೆಯ ಕಣಗಳೆಲ್ಲ.!
ಸಂಕಷ್ಟ ಕಾಲ ಕಲಿಸಿದ ಪಾಠ ಬಾಳಿಗೆ ಪಠ್ಯವಾಗಲಿ
ಅತಿಯಾಸೆ ಅತಿದಾಹ ಅಹಮಿಕೆ ಅಪಥ್ಯವಾಗಲಿ
ದಯೆ ಕರುಣೆ ಔದಾರ್ಯ ಅಡಿಗಡಿಗು ನಿತ್ಯವಾಗಲಿ
ದಿಕ್ಕು ಬದಲಿಸುತಿಹ ಸಂಕ್ರಂಮಣದ ಭಾಸ್ಕರನೇ
ಬದುಕಿನ ಸತ್ಯಗಳು ಸರ್ವರಿಗೂ ಸಾಂಗತ್ಯವಾಗಲಿ.!
ಬಸವಳಿದ ಬುವಿಯಲ್ಲಾಗಲಿ ಸಂತಸ ಕ್ರಾಂತಿ
ದೂರಾಗಲಿ ಜೀವಜೀವನಗಳಿಗೆ ಕವಿದ ಅಶಾಂತಿ
ಮತ್ತೆ ಮರುಕಳಿಸಲಿ ಸಂಭ್ರಮ ಸಡಗರ ಸಂಪ್ರೀತಿ
ಬಂಧಗಳ ಬಣ್ಣಗೆದರಿ ನಾಳಿನ ಭರವಸೆಗಳ ಹೊತ್ತು
ಮನೆ-ಮನಗಳನು ಮಧುವಾಗಿಸಲಿ ಸಂಕ್ರಾಂತಿ.!
-ಎ.ಎನ್.ರಮೇಶ್. ಗುಬ್ಬಿ.