ಕೋವಿಡ್-19 ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ: ಸಿಎಂ ಬೊಮ್ಮಾಯಿ ಅವರಿಗೆ ಬಳ್ಳಾರಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ ವಿವರಿಸಿದ ಡಿಸಿ ಮಾಲಪಾಟಿ

ಬಳ್ಳಾರಿ,ಜ.18: ಬಳ್ಳಾರಿ ಜಿಲ್ಲೆಯ ಕೋವಿಡ್-೧೯ ನಿರ್ವಹಣಾ ಮತ್ತು ಲಸಿಕಾ ಅಭಿಯಾನದಲ್ಲಿ ಪ್ರಗತಿ ಸಾಧಿಸಿದ ವಿವರಗಳನ್ನು ಮತ್ತು ಜಿಲ್ಲೆಯಲ್ಲಿರುವ ಕೋವಿಡ್-೧೯ ಸಕ್ರಿಯ ಪ್ರಕರಣಗಳ ಕುರಿತು ಬಳ್ಳಾರಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿವರಿಸಿದರು.


ಕೋವಿಡ್-೧೯ ನಿರ್ವಹಣಾ ಮತ್ತು ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಂಗಳವಾರ ಮುಖ್ಯಮಂತ್ರಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದ ತಮ್ಮ ಕಚೇರಿಯ ಕೆಸ್ವಾನ್ ಮೂಲಕ ಪಾಲ್ಗೊಂಡು ಅವರು ಬಳ್ಳಾರಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ ವಿವರಿಸಿದರು.
ಜಿಲ್ಲೆಯಲ್ಲಿ ಬಳ್ಳಾರಿ ನಗರ ಹಾಗು ಸಂಡೂರು ಮತ್ತು ಜಿಂದಾಲ್ ಕಾರ್ಖಾನೆಯಲ್ಲಿ ಅತಿ ಹೆಚ್ಚು ಕೋವಿಡ್-೧೯ ಪ್ರಕರಣಗಳು ಇವೆ ಎಂದು ಹೇಳಿದರು. ಈಗಾಗಲೇ ೧೦ ಆರ್.ಆರ್.ಆರ್. ತಂಡಗಳನ್ನು ಸಕ್ರಿಯ ಪ್ರಕರಣಗಳನ್ನು ನೋಡಿಕೊಳ್ಳುವುದಕ್ಕೆ ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು. ಈಗಾಗಲೇ ಜಿಲ್ಲೆಯಲ್ಲಿ 30ಸಾವಿರ ಮೆಡಿಸಿನ್ ಕಿಟ್‌ಗಳನ್ನು ವಿತರಿಸಲಾಗಿದೆ ಮತ್ತು ಜಿಲ್ಲೆಯಲ್ಲಿ ಮೊದಲ ಸುತ್ತಿನಲ್ಲಿ ಕೋವಿಡ್ ಲಸಿಕೆಗಳು ಶೇ.100ರಷ್ಟು ನೀಡಲಾಗಿದೆ ಹಾಗೂ ಎರಡನೇಯ ಸುತ್ತಿನ ಲಸಿಕೆಗಳು ಶೇ.79ರಷ್ಟು ನೀಡಲಾಗಿದೆ ಎಂದು ತಿಳಿಸಿದರು.
ಜಿಂದಾಲ್ ಕಾರ್ಖಾನೆಗೆ 10 ದಿನಗಳ ಹಿಂದೆ ಹೊರ ರಾಜ್ಯಗಳಿಂದ ಕಾರ್ಮಿಕರು ಆಗಮಿಸಿರುವ ಹಿನ್ನೆಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುತ್ತದೆ ಹಾಗೂ 2-3 ತಿಂಗಳವರೆಗೆ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರಬಾರದೆಂದು ಆದೇಶ ಮಾಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್, ಮುಖ್ಯ ಕಾರ್ಯದರ್ಶಿರವಿಕುಮಾರ್, ಹಿರಿಯ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.


*****