ಮೌನ
ಮೌನದ ಅರ್ಥವ ಹುಡುಕಲು ಹೋದೆ
ಮಾತುಗಳ ಖಾಲಿತನ ಅನುಭವಿಸಬೇಕೆಂದನೊಬ್ಬ
ಮಾತುಗಳಿಗೆ ನಿಲುಕದಿಹ ಭಾವ ಮೌನವೆಂದ ಇನ್ನೊಬ್ಬ
ಮೌನ ಮೌನವಾಗಿಯೇ ಮುಗುಳು ನಗೆ ಬೀರಿತು!
ಉರಿವ ದೀಪವ ಕೇಳಿದೆ ಮೌನವೇನೆಂದು
ಅಸ್ತಿತ್ವವೇ ಇಲ್ಲದ ಹಾಗೇ ನನ್ನನೇ ಸುಡುತಿಹೆನು,
ನನಗಿಂತ ಭುವಿಯ ಮಡಿಲಲಿ ಮಲಗಿ
ಕನಸುಗಳ ಚಿಗುರಿಸುವ ಬೀಜವ ಕೇಳೆಂದಿತು!
ಹುಣ್ಣಿಮೆಯ ಚಂದ್ರನ ಮೊರೆ ಹೋದೆ
ಮತ್ತೊಬ್ಬನ ಬೆಳಕ ಪ್ರತಿಫಲಿಸುವ ನನಗಿಂತ
ಮೂಡಣ ಪಡುವಣಗಳ ಹಾದಿಯೊಳ
ಹೆಜ್ಜೆ ಮೂಡಿಸದೇ ಬೆಳಗುವ ದಿನಕರನ ಕೇಳೆಂದ!
ಬಿರು ಬೀಸಾಗಿ ಬೀಸುವ ಗಾಳಿಯೊಳು
ಸಮುದ್ರದ ಭೋರ್ಗೆರವ ಅಲೆಗಳಲಿ
ಊಹೂಂ..ಇದಲ್ಲ ಮೌನ
ಮೌನ ದಂಡೆಯಲಿಲ್ಲ ಒಳಗೆ ಬಾ ಪಿಸುಗುಟ್ಟಿತು ಶರಧಿ!
-ಮಹಮ್ಮದ್ ರಫೀಕ್, ಕೊಟ್ಟೂರು