ಫೆ.8ರಿಂದ ಫೆ.19ರವರೆಗೆ ಮೈಲಾರ ಕಾರ್ಣಿಕೋತ್ಸವ ಜಾತ್ರೆ: ಈ ಬಾರಿಯೂ ಸಾರ್ವಜನಿಕರ ನಿರ್ಬಂಧ -ವಿಜಯನಗರ ಡಿಸಿ ಅನಿರುದ್ಧ ಶ್ರವಣ್

ಹೊಸಪೇಟೆ(ವಿಜಯನಗರ ಜಿಲ್ಲೆ),ಜ.21: ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವವು ಫೆ.8ರಿಂದ ಫೆ.19ರವರೆಗೆ ನಡೆಯಲಿದೆ.
11 ದಿನಗಳ ಕಾಲ ನಡೆಯಲಿರುವ ಈ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಸಾರ್ವಜನಿಕರು,ಭಕ್ತಾದಿಗಳ ನಿರ್ಬಂಧ ವಿಧಿಸಲಾಗಿದೆ.


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಅನಾರೋಗ್ಯದ ಹಿನ್ನೆಲೆ ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ದೇವಸ್ಥಾನದ ರೂಢಿ,ಸಂಪ್ರದಾಯದ ಪೂಜಾ ಕಾರ್ಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ಯಾವುದೇ ರೀತಿಯ ಆಡಚಣೆ ಇಲ್ಲದಂತೆ ಸುಸೂತ್ರವಾಗಿ ಜರುಗಲಿವೆ. ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಸಭೆಗೆ ತಿಳಿಸಿದರು.
ಫೆ.8ರಂದು ಕಂಕಣಧಾರಣೆ, ಫೆ.16ರಂದು ಹುಣ್ಣಿಮೆ,ಫೆ.18ರಂದು ಕಾರ್ಣಿಕೋತ್ಸವ ಮತ್ತು ಫೆ.19ರಂದು ಸರಪಳಿ ಪವಾಡ ಜರುಗಲಿವೆ ಎಂದು ತಿಳಿಸಿದ ಡಿಸಿ ಅವರು ಸಾರ್ವಜನಿಕರು ಮತ್ತು ಭಕ್ತಾದಿಗಳು 11 ದಿನಗಳ ಕಾಲ ಗ್ರಾಮಕ್ಕೆ ಬರದಂತೆ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕ.
.ಕುರುವತ್ತಿ,ಹ್ಯಾರಡ,ಹೊಳಲು,ಹಾವೇರಿ,ಹೊಳಕಡೆ, ಡೆಂಕನಮರಡಿಯ ಎಲ್ಲ ದಾರಿಗಳಿಗೆ ಸೂಕ್ತ ಬ್ಯಾರಿಕೆಡ್ ವ್ಯವಸ್ಥೆ ಮಾಡಿಕೊಂಡು ಪ್ರವೇಶ ನಿರ್ಬಂಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಡಿಸಿ ಅನಿರುದ್ಧ ಶ್ರವಣ್ ಅವರು ಸೂಚಿಸಿದರು.
ದರ್ಶನಕ್ಕೂ ಸಹ ನಿರ್ಬಂಧ ವಿಧಿಸಲಾಗುತ್ತಿದ್ದು,ಈ ಕುರಿತು ಪ್ರತ್ಯೇಕ ಆದೇಶವನ್ನು ಜಿಲ್ಲಾಡಳಿತದಿಂದ ಹೊರಡಿಸಲಾಗುವುದು ಎಂದರು.
ಜಾತ್ರಾಪ್ರದೇಶದಲ್ಲಿ ಯಾವುದೇ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅನಿರುದ್ಧ ಶ್ರವಣ್ ಅವರು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡಿದ್ದ ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಅವರು ವಾರ್ಷಿಕ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವದಲ್ಲಿ ಆರೋಗ್ಯ ಸೇವೆ,ಸ್ವಚ್ಛತೆ ಮತ್ತು ನೈರ್ಮಲ್ಯೀಕರಣಕ್ಕೆ ವಿಶೇಷ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮದ ಎಲ್ಲಾ ಬೀದಿಗಳು ಸ್ವಚ್ಚಾಗಿಡಲು, ಚರಂಡಿಗಳನ್ನು ಕ್ಲೀನ್ ಮಾಡಲು, ನಿತ್ಯ ಫಾಗಿಂಗ್ ಮಾಡಲು ಅಗತ್ಯ ಕ್ರಮ ಜರುಗಿಸಬೇಕು ಎಂದರು.
ಸಭೆಯಲ್ಲಿ ಎಸ್ಪಿ ಡಾ.ಅರುಣ ಎಸ್.ಕೆ, ಜಿಪಂ ಸಿಇಒ ಹರ್ಷಲ್ ಬೊಯರ್ ಅವರು ಮಾತನಾಡಿ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್,ಅಪರ ಜಿಲ್ಲಾಧಿಕಾರಿ ಮಹೇಶಬಾಬು, ಹರಪನಹಳ್ಳಿ ಸಹಾಯಕ ಆಯುಕ್ತ ಚಂದ್ರಶೇಖರಯ್ಯ, ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶರಾವ್, ಹಡಗಲಿ ತಹಸೀಲ್ದಾರ್ ಮಹೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.