ಅನುದಿನ ಕವನ-೩೮೬, ಕವಯತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು.

ತುಂಬಿದೆ ಜಗವ ಸಾವಿರದ ಸಾವಿರ
ಪ್ರಲೋಭನೆ, ಆಕರ್ಷಣೆಗಳ ಪಂಜರ.
ಅಭಿವೃದ್ಧಿಯೆಡೆಗೆ ಸಾಗದಂತೆ ನಿನ್ನ
ತಡೆವ ಸ್ವಾರ್ಥದಮಲಿನ ಕಂದರ.

ಪಂಜರ ಹರಿದು, ಕಂದರ ದಾಟಿ
ಧೀಶಕ್ತಿ ತುಂಬಿ ಹೊರ ಬಂದರೆ ನೀನು,
ಗೆದ್ದೇ ಗೆಲಬಹುದು ನೋಡು
ಹತಾಶೆ ದೌರ್ಬಲ್ಯಗಳ ಕಾನು.

ಕಣ್ಣ ಮುಂದಿರೆ ಅನಂತ ಶಕ್ತಿಯ ಕಲ್ಪ
ಪಂಜರದಲೇ ಗೋಳಿಡುವುದಾವ ತತ್ವ?
ಸಾಗಬೇಕು ನೀನು ವಿಶ್ವದಾಂತರ್ಯದ ಮುಕ್ತಿಗೆ.
ಕಂದರದಲೇ ನಿಲುವುದು ತರವೆ ನಿನ್ನ ಶಕ್ತಿಗೆ?

ಶಕ್ತಿಯಿದೆ ನಿನ್ನಲಿ, ಯುಕ್ತಿಯಿದೆ ಮನದಲಿ.
ಹೊರಹೊಮ್ಮಿಸದೇ ಸುಮ್ಮನಿಹುದು ಸಮವೇ?
ಯತ್ನ ಮಾಡದಿರುವುದೇ ಹಿರಿಯ ದೌರ್ಬಲ್ಯ.
ಅದ ನಿವಾರಿಸಿ ಹಿಗ್ಗಿ ನೀ ಬೆಳೆ ಎಲೆ ಮನವೇ!

ಸ್ವಾಮಿ ವಿವೇಕಾನಂದರ ನುಡಿ ನಂಬು ನೀ
ಬದುಕಲಿ ಬೆಳೆವೆ ವಟವೃಕ್ಷದಂತೆ,
ಜನಕೆ ನೀಡಿ ಶಾಂತಿ ನೆಮ್ಮದಿ ಭರವಸೆ
ದೂರ ಮಾಡುವೆ ಜಗದೆಲ್ಲ ಚಿಂತೆ.

-ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು
*****