ಅನುದಿನ‌ ಕವನ-೩೮೭, ಕವಿ: ಅಜೋ(ಅರುಣ್ ಜೋಳದಕೂಡ್ಲಿಗಿ), ಕವನದ ಶೀರ್ಷಿಕೆ:ಬೀದಿ ದೀಪದ ಲೆಕ್ಕದ ಪುಸ್ತಕದಲ್ಲಿ ಕಂಡ ಮುಖಗಳು…..

ಬೀದಿ ದೀಪದ ಲೆಕ್ಕದ ಪುಸ್ತಕದಲ್ಲಿ ಕಂಡ ಮುಖಗಳು


ರಾತ್ರಿ ಪೂರಾ ಉರಿದು ದಣಿದ ಬೀದಿ ದೀಪ
ಬೆಳಗಾಗುತ್ತಲೂ ತನ್ನ ಬೆಳಕಲ್ಲಿ
ಹಾದು ಹೋದ ಮುಖಗಳನ್ನು ಲೆಕ್ಕ ಹಾಕಿ
ಖಾತೆಯಲ್ಲಿ ಬರೆದಿಡುತ್ತಿತ್ತು !
ಲೆಕ್ಕ ತಪ್ಪುತ್ತಲೂ ರಸ್ತೆಯ ಮಾತಿಗೆಳೆದು
ಗೆಳೆಯಾ ನೀ ಬರೆದಿಟ್ಟ ನೆರಳಿನ ಪುಸ್ತಕ ಕೊಡು
ತಾಳೆ ನೋಡಿ ಸರಿಹೊಂದಿಸುವೆ
ಎಂದು ಮೆಲುದನಿಯಲ್ಲಿ ನುಡಿಯಿತು !
ಅಷ್ಟಕ್ಕೂ ಲೆಕ್ಕ ಸಿಗದಿದ್ದರೇನಂತೆ ?
ರಾತ್ರಿ ನಡೆದವರ ಮೈಮೇಲೆ ಹೊದ್ದು ಹೋದ
ಬೆಳಕಿನ ದುಪ್ಪಡಿಗಳು ಇನ್ನೇನು ಮರಳುವ ಸಮಯ
ಅವುಗಳ ಕಥೆ ಕೇಳಲು ಸಜ್ಜಾಗು ಮಾರಾಯ
ಎಂದು ರಸ್ತೆ ಕೊಂಕು ನುಡಿಯಿತು !

ಮರಳಿ ಬಂದ ಬೆಳಕಿನ ದುಪ್ಪಡಿಗಳು
ಕೈಕಟ್ಟಿ ವಿಧೇಯವಾಗಿ ಬೀದಿ ದೀಪದೆದುರು
ವರದಿ ಒಪ್ಪಿಸುತ್ತಿವೆ !

ಒಂದರ ವರದಿ:
ಗಂಡ ಬರುವ ಹೊತ್ತಾಯಿತು ಬಿಡು ಸಾಕಿನ್ನು
ಎಂದು ಕೈಕೊಸರಿ ಎದ್ದು ಹೋದದ್ದಷ್ಟೆ ನೆನಪು !

ಎರಡರ ವರದಿ:
ಅವಳು ಕನಸಿಗೆ ಬಂದ ಹುಡುಗನೊಂದಿಗೆ
ಪಿಸುಗುಟ್ಟಿ ಮುಸಿಮುಸಿ ಅಳುತ್ತಿದ್ದಳು !
ಕ್ಷಮಿಸಿ ಅವನು ಮರೆತ ಚಪ್ಪಲಿಗಳು ನನ್ನ ಕಾಲಲ್ಲಿವೆ !

ಮೂರರ ವರದಿ:
ಆ ಓಣಿಯಲ್ಲಿ ಮಧ್ಯರಾತ್ರಿ ಭೀಕರ ಗಲಭೆಯಾಯಿತು
ನಾ ಹೊದ್ದು ಹೋದವನ ಧರ್ಮದ ಹೆಸರೇಳಿ ಕೊಂದರು
ನೋಡಿ ನನ್ನ ಮೈಮೇಲೆ ರಕ್ತದ ಕಲೆಗಳಿವೆ !

ನಾಲ್ಕರ ವರದಿ:
ಆ ಕಡು ವ್ಯಾಮೋಹಿಯ ಬೆನ್ನೇರಿ ಹೋದೆ ಆತ ಅರೆ ಹುಚ್ಚ
ಯಾರನ್ನೋ ಬೈಯುವುದು ಚಿತ್ರದೊಂದಿಗೆ
ಬಿಕ್ಕಳಿಸುವುದು ಬೆತ್ತಲೆಯಾಗಿ ಗಹಗಹಿಸುವುದು
ಅಬ್ಬಬ್ಬಾ ರಾತ್ರಿಯಿಡೀ ನನಗೆ ನಿದ್ದೆಯಿಲ್ಲ !


ಸಾಕು ಎನ್ನುವಂತೆ ಕೈ ಮಾಡಿ
ನಡುಕ ಹುಟ್ಟಿ ಬೀದಿ ದೀಪ ಮೌನವಾಯಿತು !
ಮೊನ್ನೆ ಚೆಂದದ ಹುಡುಗಿಯ ಮೈಹೊದ್ದು ಹೋದ
ಬೆಳಕಿನ ದುಪ್ಪಡಿ ಇನ್ನೂ ಮರಳದಿರುವ ಬಗ್ಗೆ
ಉಳಿದವುಗಳಿಗೆ ಹೊಟ್ಟೆಕಿಚ್ಚು !
ಬೆನ್ನಮೇಲೆ ಬಿಡುವಿಲ್ಲದ ವಾಹನಗಳ ಓಡಾಟದ ಮಧ್ಯೆಯೂ
ರಸ್ತೆ ತನ್ನ ನೆರಳ ಖಾತೆಯ ತಿರುವಿ
ಹಳೆಯ ಮುಖಗಳಲ್ಲಿ ಏನನ್ನೋ ಹುಡುಕುತಿದೆ !
ಇದು ಕಡೆಯ ಮಾತು ಎಂಬಂತೆ
ಬೀದಿ ದೀಪ ಮೌನ ಮುರಿದು ಹೇಳಿತು
`ಹೇ ಸೂರ್ಯನೆ ನಿತ್ಯವೂ ಜಗದ ಚರಾಚರಗಳಿಗೆ
ನೀ ಬೆಳಕಿನ ದುಪ್ಪಡಿ ಹೊದಿಸುವೆ
ರಾತ್ರಿಗೆ ಆವುಗಳೆಲ್ಲಾ ತಾನು ಹೊದ್ದವರ ಕತೆ ಹೇಳಲು
ಶುರು ಮಾಡಿದರೆ,
ನೀನು ಚೂರು ಚೂರಾಗುವುದ ನೋಡಲು
ನನಗೆ ಆತಂಕವಾಗುತ್ತಿದೆ !’

-ಅಜೋ (ಅರುಣ್ ಜೋಳದ ಕೂಡ್ಲಿಗಿ)
*****