ಅನುದಿನ ಕವನ-೩೮೯, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಸೂರ್ಯನ‌ ಕೊಲೆ

ಸೂರ್ಯನ ಕೊಲೆ

ಯಾರೋ ಬಂದು ಹೇಳಿದರು
ಸಂಜೆ ಸೂರ್ಯ ಕೊಲೆಯಾದ
ಆಗಸದ ತುಂಬೆಲ್ಲ
ರಕ್ತ ಚೆಲ್ಲಿತ್ತು ಅಂತ
ಇರುಳೆಲ್ಲ ಚಿಂತಿಸಿದೆ
“ ಕೊಲೆಗಾರ “ ಯಾರಿರಬಹುದೆಂದು
ಬೆಳಿಗ್ಗೆ ಮತ್ತೆ ಮೂಡಿದ ಸೂರ್ಯನನ್ನೇ
ಅಚ್ಚರಿಯಿಂದ ಕೇಳಿದೆ
“ನಿನ್ನೆ ನಿನ್ನ ಕೊಲೆಯಾಯ್ತೆ? “
“ಯಾರು ನಿನ್ನ ಕೊಂದವರು? “ ಅಂತ
ಸೂರ್ಯ ಮುಗುಳ್ನಕ್ಕು ಹೇಳಿದ
“ನನ್ನ ಕೊಲೆಯಾಗಲೂ ಇಲ್ಲ
ನಾನು ಸಾಯಲೂ ಇಲ್ಲ
ಅದೆಲ್ಲ “ ನಾಟಕ “ ಅಂತ
ನನ್ನದಷ್ಟೇ ಯಾಕೆ
ಬುವಿಯ ಮೇಲೆ
ಪ್ರತಿದಿನವೂ
ನಡೆಯುವುದೆಲ್ಲವೂ
“ ನಾಟಕವೇ “ ಎನ್ನುತ್ತ
ನಭಕ್ಕೆ ಜಿಗಿದ

-ಸಿದ್ಧರಾಮ ಕೂಡ್ಲಿಗಿ
*****