ಅನುದಿನ ಕವನ-೩೯೦, ಕವಿ: ಶಶಿಕಾಂತ ಯಡಹಳ್ಳಿ, ಬೆಂಗಳೂರು, ಕವನದ ಶೀರ್ಷಿಕೆ: ಪ್ರೀತಿ ಎಂದರೆ….

ಪ್ರೀತಿ ಎಂದರೆ..

ಇಷ್ಟವಾದಾಗ ಜೊತೆಯಾಗಿ
ಕಷ್ಟವಾದಾಗ ದೂರಾಗುವ ದುರಂತಕ್ಕೆ
ಪ್ರೀತಿ ಎಂದು ಆರೋಪಿಸದಿರು
ಕಡುಕಷ್ಟದಲೂ ಬಿಡದೆ ಕೈ ಹಿಡಿದು
ಜೊತೆನಡೆದರೆ ಇಂದಿಲ್ಲ ನಾಳೆ
ಹಗುರಾದೀತು ಮನಸಿನ ಭಾರ

ಎಲ್ಲರಿಗೂ ಗೊತ್ತಿದೆ ಪ್ರಯತ್ನಿಸಿದರೆ
ಪ್ರೀತಿ ಮಾಡುವುದು ಸುಲಭ
ಕೊನೆಯವರೆಗೂ ನಿಭಾಯಿಸುವುದೇ
ಬದುಕಿನ ಬಲು ದೊಡ್ಡ ಸವಾಲು
ಹೊರಗಿನ ಶತ್ರುಗಳ ಮಾತಿರಲಿ
ಪರಸ್ಪರ ಅಹಮಿಕೆಯೊಂದೇ ಸಾಕು
ಪ್ರೇಮದ ಸಾವಿಗೆ ಒಲವಿನ ಸಮಾಧಿಗೆ

ಸೋಲುವುದು ಬೇಕಿಲ್ಲದವರು
ಸೋತಷ್ಟೂ ದ್ವೇಷಿಸುವವರು
ಪ್ರೇಮದ ವಿಷಯ ಬಿಟ್ಟು ಬೇರೆ
ಬದುಕುವ ದಾರಿ ಹುಡುಕುವುದು ಒಳಿತು
ಸದಾ ಗೆಲ್ಲುವ ತವಕ ಎಲ್ಲಿಯ ತನಕ
ಇಲ್ಲಿ ಪ್ರೇಮದಲ್ಲಿ ಸೋಲೇ ಗೆಲುವಿಗೆ
ಮೊದಲ ಹಾಗೂ ಕೊನೆಯ ಮೆಟ್ಟಿಲು
ಸಹನೆಯೊಂದೇ ಒಲವೆಂಬ
ಮಗುವ ಪೊರೆವ ತೊಟ್ಟಿಲು

ಅಷ್ಟಕ್ಕೂ ಪ್ರೀತಿ ಎಂದರೆ ಮತ್ತೇನಿಲ್ಲ
ಅಪಸ್ವರಗಳನ್ನೆಲ್ಲಾ ಮೀರಿದ
ಪರಸ್ಪರ ಗೌರವ ನಂಬಿಕೆ ಮತ್ತು
ರಾಜಿರಹಿತ ಹೊಂದಾಣಿಕೆ
ಇಲ್ಲವಾದರೆ ಅಸಹನೀಯ ಸಹಜೀವನ
ಅಂಗಾಲಿನಲಿ ಮುರಿದ ಮುಳ್ಳೊಂದಿಗೆ
ನಡೆದಂತೆ ಬದುಕಿನ ಬಾಕಿ ಪಯಣ

– ಶಶಿಕಾಂತ ಯಡಹಳ್ಳಿ, ಬೆಂಗಳೂರು
*****