ಕನಸಿನ ಕನವರಿಕೆಯಲ್ಲ ಪ್ರೀತಿ
ತುಂಬಿ ಹರಿಯುವ ನದಿ
ಮಂದಿಯ ಮಾತಿಗೆ ಹೆದರಿ
ನಿರಾಶೆಯ ಮೋಡ ಕಟ್ಟಿಕೊಳ್ಳಬೇಕೇಕೆ ಪ್ರೇಮಿಗಳು?
ಪಥ ಬದಲಿಸಬೇಕೇಕೆ ಹೆದರಿ?
ಮಂದಿಗೆ ಬೇರೇನು ಕೆಲಸ?
ಬಣ್ಣದ ಕತೆ ಕಟ್ಟುವುದು
ಮುಳ್ಳಿನ ಬೇಲಿ ಹೆಣೆಯುವುದು
ನೆಗೆದು ಹಾರಬೇಕು ಮಳೆಬಿಲ್ಲಿನ ಲೋಕಕೆ
ಬಿಲ್ಲಿನ ಮೇಲೆ ನಾವೆ ಹೂಡಿ
ಮುದದಿಂದ ತೇಲಲಿಕೆ
ನೋಡಿದರೆ ಈಗ
ಹಿಂದೆ ಬಿದ್ದಿದ್ದಾರೆ ಮುಳ್ಳು ಮಾತಿನವರು
ಕುಂಟು ಕಾಲಿನಲಿ
ತಮ್ಮದೇ ಮಾತುಗಳನ್ನು ತಾವೇ
ಜೀರ್ಣಿಸಿಕೊಳ್ಳಲಾಗದ ಭಂಗಿಯಲಿ
ಹೃದಯಗಳು ಒಂದಾಗುವುವು ಎಂಬುದು
ಹಳೆಯ ಮಾತಿರಬಹುದು
ಎದೆಯ ಮಾತಿಗೆ ಸರಿಸಾಟಿ ಯಾವುದೂ ಇಲ್ಲ
ಯಾರಿಗೂ ಪ್ರವೇಶ ಇಲ್ಲ ಅಲ್ಲಿ
ಪ್ರೇಮಿಗಳ ಪಿಸುಮಾತಿನ ಹೊರತು
-🖊️ವಿನಿಶಾಗೋಪಿನಾಥ್
******