ಅಧ್ಯಕ್ಷರು ಕಸಾಪ ಮೂಲ ಅಸ್ಮಿತೆ ಕಾಪಾಡಲಿ
ರಾಜ್ಯ ಕಸಾಪ ಅಧ್ಯಕ್ಷರ ಪ್ರತಿ ನಿತ್ಯದ ಹೇಳಿಕೆಗಳು ರಾಜಕೀಯ ಸ್ವರೂಪ ಪಡೆದು ಸಾಹಿತ್ಯ ಪರಿಷತ್ತಿನ ಆಶಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಸೆಲೆಬ್ರಿಟಿ ಅಂದುಕೊಂಡವರು, ಸಾಹಿತ್ಯ, ಸಂಸ್ಕೃತಿಯ ಮೂಲ ಉದ್ದೇಶವನ್ನು ಸರಿಯಾಗಿ ಗ್ರಹಿಸದೇ ಹೋದರೆ ಅಪಾಯ ತಪ್ಪಿದ್ದಲ್ಲ.
ಈ ಅವಾಂತರದ ಹೇಳಿಕೆಗಳಿಗೆ ಮುಖ್ಯ ಕಾರಣ ಬಹುಮತದ ಗುಂಗು ಮತ್ತು ನಶೆ, ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಬೆಲೆ ಇದೆ ಆದರೆ ಅದರ ಘನತೆಯನ್ನು ಮರೆಯಲಾಗದು.
ಸುಧಾರಣೆಯ ನೆಪದಲ್ಲಿ ಬೈಲಾ ತಿದ್ದುಪಡಿ ಅಸ್ತ್ರ ಇಟ್ಟುಕೊಂಡು ಸಂಪೂರ್ಣ ಬದಲಾವಣೆ ಮಾಡುವ ಆಲೋಚನೆ ಖಂಡನೀಯ. ಈಗಾಗಲೇ ಅವರು ಮಾಡಬಯಸಿರುವ ಯಾವುದೇ ತಿದ್ದುಪಡಿಗಳನ್ನು ಸಮಗ್ರವಾಗಿ ಒಪ್ಪಲಾಗದು. ಅದಕ್ಕೆ ಮುಖ್ಯ ಕಾರಣ ಪರಿಷತ್ತು ಕನ್ನಡದ ಮನಸುಗಳ ಪ್ರತಿನಿಧಿ, ಅಕ್ಷರಸ್ಥ, ಅನಕ್ಷರಸ್ಥ ಎಂಬ ತರತಮ ಇರುವುದಿಲ್ಲ.
ಸಂವಿಧಾನದ ಆಶಯದ ಅನುಗುಣವಾಗಿ ಬಲ್ಲವರು, ತಿಳಿದವರು ಆಳವಾಗಿ ಆಲೋಚನೆ ಮಾಡಿ ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ. ಆರ್ಥಿಕ ಬಲವಿಲ್ಲದೆ ಜನರನ್ನು ಒಗ್ಗೂಡಿಸುವ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ನುಡಿ-ನೆಲ-ನೀರು ರಕ್ಷಣೆಯ ಉದ್ದೇಶ ಇಟ್ಟುಕೊಂಡು ಹೋರಾಟ ಮಾಡಿ, ಮೌಲಿಕ ಸಮ್ಮೇಳನಗಳನ್ನು ಸಂಘಟಿಸಿದ್ದಾರೆ.
ಆದರೆ ತಾವು ಗಳಿಸಿದ ಬಹುಮತ, ಈಗ ಇರುವ ಆರ್ಥಿಕ ಬಲ ಮತ್ತು ಸರಕಾರದ ಹೇರಳ ಅನುದಾನದ ಶ್ರೀರಕ್ಷೆ ಕಸಾಪ ಅಧ್ಯಕ್ಷರನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬಾರದು ಎಂದು ನಿವೇದನೆ ಮಾಡಿಕೊಳ್ಳುತ್ತೇನೆ.
ಕಸಾಪ ಜಿಲ್ಲಾ ಅಧ್ಯಕ್ಷರು ಕೂಡ ನೇರವಾಗಿ ಅಜೀವ ಸದಸ್ಯರಿಂದ ಚುನಾಯಿತರಾಗಿದ್ದಾರೆ, ಅವರಿಗೂ ರಾಜ್ಯಾಧ್ಯಕ್ಷರಿಗೆ ಇರುವಷ್ಟು ಗೌರವ ಇದೆ. ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಒಪ್ಪಿಗೆ ಪಡೆಯದ ವಿಷಯಗಳನ್ನು, ಎಲ್ಲರ ನಿರ್ಧಾರ ಎಂಬಂತೆ ಹೇಳಿಕೆಗಳನ್ನು ಕೊಡುವುದು ಅಸಮಂಜಸ, ಅವರ ಹೇಳಿಕೆಗಳನ್ನು ನೋಡಿ ಸುಮ್ಮನಿರುವ ಜಿಲ್ಲಾ ಅಧ್ಯಕ್ಷರುಗಳ ಮೌನವೂ ಗುಲಾಮಿತನದ ಸಂಕೇತ.
ಚುನಾವಣೆ ಮುಗಿದು ತಿಂಗಳುಗಳೇ ಗತಿಸಿದರೂ, ತಾಲೂಕಾ ಅಧ್ಯಕ್ಷರ ನೇಮಕವಾಗಿಲ್ಲ, ಪರಿಷತ್ತಿನ ಅಧಿಕೃತ ಚಟುವಟಿಗಳು ಆರಂಭವಾಗಿಲ್ಲ. ಜಿಲ್ಲಾ ಅಧ್ಯಕ್ಷರುಗಳನ್ನು ವಿಚಾರಿಸಿದರೆ, ಪಟ್ಟಿ ಅನುಮೋದನೆಗೆ ರಾಜ್ಯದ ಅಧ್ಯಕ್ಷರ ಬಳಿ ಇದೆ ಎಂದು ಹೇಳುತ್ತಾರೆ. ಇದೇನು ಸರಕಾರಿ ಕಚೇರಿಯೇನು? ಅನುಮೋದನೆ ಪಡೆಯಲು ಮತ್ತು ಆ ಕಡತವನ್ನು ಇಟ್ಟುಕೊಂಡು ಅಧಿಕಾರ ಪ್ರದರ್ಶನ ಮಾಡಲು. ಇಂತಹ ಕೃತಕ, ಅಧಿಕಾರಶಾಹಿ ಪ್ರದರ್ಶನ ಕನ್ನಡಿಗರ ಆತ್ಮ ಗೌರವಕ್ಕೆ ಪೆಟ್ಟು ಕೊಡುತ್ತದೆ.
ನಾಡಿನ ಹಿರಿಯ ಸಾಹಿತಿಗಳು, ಹೋರಾಟಗಾರರು ತಮ್ಮ ಮೌನ ಮುರಿದು ಪರಿಷತ್ತನ್ನು ಉಳಿಸುವ ಕೆಲಸ ಮಾಡಬೇಕು.
ಪರಿಷತ್ತಿನ ಅಧ್ಯಕ್ಷರು ಎಂದರೆ ರಾಜ ಮಹಾರಾಜರು ಅಲ್ಲ, ಮಂತ್ರಿ ಮಹೋದಯರು ಅಲ್ಲ, ನಮ್ಮ ಕನ್ನಡದ ಅಸ್ಮಿತೆ ಮತ್ತು ಪ್ರತಿನಿಧಿ. ಇದು ‘ಅಧಿಕಾರ’ ಅಲ್ಲ, ಕನ್ನಡದ ನುಡಿ ‘ಸೇವೆ’.
ಚುನಾವಣೆಯ ಸಂದರ್ಭದಲ್ಲಿ ನನ್ನೊಂದಿಗೆ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ಮಹೇಶ ಜೋಶಿ ಅವರು, ತಾವು ಅತ್ಯಂತ ಸರಳವಾಗಿ ನಡೆದುಕೊಂಡು ಪರಿಷತ್ತಿನ ಘನತೆಯನ್ನು ಕಾಪಾಡುತ್ತೇನೆ, ಹಿರಿಯ ಅಧಿಕಾರಿ ಎಂಬ ದರ್ಪದ ಪ್ರದರ್ಶನ ಮಾಡುವುದಿಲ್ಲ ಎಂದಿದ್ದರು. ಪಾಪ! ಯಾರೋ ಅವರನ್ನು ತಪ್ಪು ದಾರಿಗೆ ಎಳೆದು, ಅವರ ಮಾತುಗಳನ್ನು ಮರೆಸುವ ಕೆಲಸ ಮಾಡುತ್ತಿರಬಹುದು. ಆದರೆ ಸನ್ಮಿತ್ರರಾದ ಮಹೇಶ ಜೋಶಿ ಅವರು ಕನ್ನಡಿಗರ ಭಾವನೆಗಳಿಗೆ ಮತ್ತು ಪರಿಷತ್ತಿನ ಘನತೆಗೆ ಕುತ್ತು ಬರದಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಈಗಲೂ ಇದೆ.
ಪರಿಷತ್ತು ಎಂದರೆ ಸರಕಾರ ಅಲ್ಲ,ಇಲ್ಲಿ ಫೈಲುಗಳ ಓಡಾಟ ಬೇಕಾಗಿಲ್ಲ.
ಆಪ್ತ ಭಾವನೆಗಳು, ಪ್ರೀತಿ, ವಿಶ್ವಾಸ, ಸೇವೆ ಮತ್ತು ಜನಪರ ಆಶಯಗಳಿಗೆ ಸ್ಪಂದಿಸುವುದೇ ಮುಖ್ಯ.
‘ಅಧ್ಯಕ್ಷರಿಗೆ ಕ್ಯಾಬಿನೆಟ್ ಸ್ಥಾನಮಾನ, ಬೆಂಗಾವಲು ವಾಹನ’ ಇತ್ಯಾದಿ, ಇತ್ಯಾದಿ ಬೇಡಿಕೆಗಳನ್ನು ಕೈಬಿಟ್ಟು, ಬೈಲಾ ತಿದ್ದುಪಡಿ ಗೊಡವೆಗೆ ಹೋಗದೇ, ಅಗತ್ಯವಿರುವ ಸಣ್ಣಪುಟ್ಟ ಬದಲಾವಣೆ ಮಾಡಿ, ಎಂದಿನಂತೆ ಸರಳವಾಗಿ ಪರಿಷತ್ತು ತನ್ನ ಚಟುವಟಿಕೆಗಳನ್ನು ಆರಂಭ ಮಾಡಿ, ಕೋಟ್ಯಂತರ ಕನ್ನಡಿಗರ ಪ್ರೀತಿಯ ಬೆಂಗಾವಲಿನ ಶ್ರೀರಕ್ಷೆ ಪಡೆಯಲಿ.
ನುಡಿ,ನೆಲ ಮತ್ತು ನೀರಿನ ವಿಷಯಕ್ಕೆ ತೊಂದರೆ ಮಾಡುವ ಹಟಮಾರಿ ಧೋರಣೆಯನ್ನು, ನಮ್ಮ ಮಾಧ್ಯಮಗಳು,ಚಿಂತಕರು, ಹೋರಾಟಗಾರರು, ನೋಡಿ ನೋಡದಂತೆ ಮೌನವಾಗಿರದೇ, ಸೂಕ್ತ ಮಾರ್ಗದರ್ಶನಕೆ ಮುಂದಾಗಲಿ ಎಂದು ಪ್ರಾರ್ಥಿಸುತ್ತೇನೆ.
-ಸಿದ್ದು ಯಾಪಲಪರವಿ, ಕಾರಟಗಿ.
9448358040.
*****