ಅನುದಿನ ಕವನ-೩೯೮, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕವನದ ಶೀರ್ಷಿಕೆ: ಅವನಿಗೊಂದು ಪತ್ರ

ಅವನಿಗೊಂದು ಪತ್ರ

ಅಚ್ಚರಿಗಳ ಅಕ್ಷಯಪಾತ್ರೆ ಅವನಿ
ನಿನ್ನ ನಿಗೂಢ ನಡೆಯನರಿಯಲು
ನಾ ಸೋತೆ, ಅಲ್ಲಲ್ಲ ನಾವು ಸೋತೆವು
ಕ್ಷಮಿಸಿ ಬಿಡು ನಮ್ಮನು.

ನೂರು ನೋವನು ನುಂಗುತ
ಸಕಲ ಜೀವಕೆ ಆಶ್ರಯವನೀಯುವ
ನಿಸ್ವಾರ್ಥದ ನಿನ್ನನರ್ಥ ಮಾಡಿಕೊಳ್ಳಲಿಲ್ಲ
ಕ್ಷಮಿಸಿ ಬಿಡು ನಮ್ಮನು.

ಮನತಣಿಸು ನಿನ್ನ ಚಲುವಿಕೆ ಮೇಲೆ
ಹುಲು ಮಾನವರ ಆಸೆ ಕಣ್ಣು
ಕ್ಷಣಿಕ ಸುಖಕೆ ಭವಿಷ್ಯ ಬಲಿ
ಕ್ಷಮಿಸಿ ಬಿಡು ನಮ್ಮನು.

ಕಂಡಲ್ಲೆಲ್ಲ ಕಸವನು ತುಂಬಿ
ಒಡಲ ತುಂಬೆಲ್ಲ ಬರೀ ವಿಷ
ನಿಷ್ಪಾಪಿಗೂ ನರಕದನುಭವ
ಕ್ಷಮಿಸಿ ಬಿಡು ನಮ್ಮನು.

ಅನ್ನ ಆಸರೆ ನೀರು ನೆರಳು
ಸಕಲ ಜೀವಿಯ ಸಲಹುವ ನೀನು
ಇನ್ನೊಂದು ಮುಖವ ತೋರದೇ
ಕ್ಷಮಿಸಿ ಬಿಡು ನಮ್ಮನು.

ಹೇಸಿ ಪಾಪದ ಫಲಕೆ
ಅಮಾಯಕರು ಬಲಿಪಶು
ಜನಕೆ ಬುದ್ಧಿ ಬರುವ ದಿನಕೆ ಕಾದಿರುವೆ
ಕ್ಷಮಿಸಿ ಬಿಡು ನಮ್ಮನು.

– ಸಿದ್ದಲಿಂಗಪ್ಪ ಬೀಳಗಿ, ಹುನಗುಂದ
*****