ಅನುದಿನ ಕವನ-೪೦೧, ಕವಿ: ಎ.ಎನ್. ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ನಿವೇದನೆ

ನಿವೇದನೆ..!

ಕಟ್ಟಬೇಡಿ ಕಂಡಕಂಡಲ್ಲೆಲ್ಲ ಗೋಡೆಯ
ಈಗಾಗಲೇ ಮನೆ-ಮನಗಳಾ ನಡುವೆ
ಲೆಕ್ಕವಿಲ್ಲದಷ್ಟು ಬೃಹತ್ ಗೋಡೆಗಳಿವೆ
ಕಟ್ಟುವುದಾದರೆ ಕಟ್ಟಿಬಿಡಿ ಸೇತುವೆ.!

ಹಚ್ಚಬೇಡಿ ಸುಖಾಸುಮ್ಮನೆ ಬೆಂಕಿಯ
ಈಗ ಸಕಲರಾ ಜೀವಜೀವನಗಳಲ್ಲೂ
ಹತ್ತತ್ತಿ ಉರಿಯುತ್ತಿದೆ ಬೆಂಕಿ ಕೂಪ
ಹಚ್ಚುವುದಾದರೆ ಹಚ್ಚಿಬಿಡಿ ದೀಪ.!

ಹಂಚಬೇಡಿ ವೃಥಾ ಹಾಲಾಹಲವನು
ಈಗ ಎಲ್ಲರಾ ಚಿತ್ತಭಿತ್ತಿ ಒಡಲುಗಳೂ
ಬೇಡದಾ ಬಯಸದಾ ವಿಷದಿಂದಾವೃತ
ಹಂಚುವುದಾದರೆ ಹಂಚಿಬಿಡಿ ಅಮೃತ.!

ಹೊತ್ತಿಸಬೇಡಿ ನಿತ್ಯ ನೋವಿನ ಹಣತೆ
ಈಗಾಗಲೇ ಸಕಲರ ಹೃದಯಗಳಲೂ
ಹಬ್ಬಿ ಹೈರಾಣಾಗಿಸಿದೆ ನರಳಿಕೆಯೊರತೆ
ಹೊತ್ತಿಸುವುದಾದರೆ ಹೊತ್ತಿಸಿ ನಗೆಪ್ರಣತೆ.!

ಬಿತ್ತಬೇಡಿ ಸುಮ್ಮನೆಲ್ಲೆಡೆÉ ಮುಳ್ಳುಗಳ
ಈಗಾಗಲೇ ಸಮಸ್ತ ತನುಮನಗಳಲಿ
ಇರಿಯುತಿದೆ ಚೂಪು ಮುಳ್ಳುಮಾಲ
ಬಿತ್ತುವುದಾದರೆ ಬಿತ್ತಿಬಿಡಿ ಸುಮಜಾಲ.!

ಸಾಕುಮಾಡಿ ಹೊಗೆ ಹಾಕುವ ಕೆಲಸ
ಹಗೆಯ ಧಗೆಯಲ್ಲಿ ಕಟ್ಟುತ್ತಿದೆ ಶ್ವಾಸ
ಸರ್ವರೆದೆಯಲ್ಲೂ ಮತ್ಸರದ ಉಬ್ಬಸ
ಬೇಕಿದೆ ಮಮಕಾರ ಹಬ್ಬಿಸುವ ಸಾಹಸ.!

ಮಾಡುವುದಾದರೆ ಮಾಡಿ ಸತ್ಕಾರ್ಯ
ಬೀರುತ್ತಾ ಅಂತಃಕರಣದ ಮಾಧುರ್ಯ
ತೋರುತ್ತಾ ಪ್ರೀತಿ ಮಮತೆ ಔದಾರ್ಯ.!
ಮತ್ತೆ ನಳನಳಿಸಲಿ ಮಾನವತೆ ಸೌಂದರ್ಯ.!

-ಎ.ಎನ್.ರಮೇಶ್, ಗುಬ್ಬಿ.
*****