ಇದು ನಮ್ಮ ನಿಮ್ಮದೇ ಎದೆಯಾಳದೊಳಗೆ ನಿತ್ಯ ಹರಿಯುತ್ತಿರುವ ಅಸೂಯೆಯೆಂಬ ಲಾವಾರಸದ ಹನಿಗಳು.. ಯುಗಯುಗದಿಂದಲೂ ಜಗವನ್ನು ಹೈರಾಣಾಗಿಸಿರುವ ಮನುಜರ ಮನದ ಕೇಡಿನ ಖನಿಗಳು. ಪ್ರತಿ ಮನುಜನ ಬದುಕನ್ನು ಸುಡುವುದು ಹೊರಗಿನ ಬೆಂಕಿಯಲ್ಲ. ಅವನದೇ ಒಳಗಣ ಮತ್ಸರದ ಕಿಡಿಗಳು. ಅಕ್ಕಪಕ್ಕದವರ ಕಿಚ್ಚಿನ ಕಿಡಿಗಳಿಂದ ತಪ್ಪಿಸಿಕೊಂಡವರು ಯಾರಿದ್ದಾರೆ ಈ ಲೋಕದಲ್ಲಿ? ಎಂದು ಪ್ರಶ್ನಿಸುತ್ತಾರೆ ಹಿರಿಯ ಕವಿ ಎ.ಎನ್.ರಮೇಶ್. ಗುಬ್ಬಿ ಅವರು ತಮ್ಮ ಕಿಚ್ಚಿನ ಹನಿಗಳಲ್ಲಿ……! 👇
ಕಿಚ್ಚಿನ ಹನಿಗಳು..
1. ಘೋರ..!
ಅಗ್ನಿಶಾಮಕದಳದವರಿಂದಲೂ
ನಂದಿಸಲಾಗದ ಕಿಚ್ಚೆಂದರೆ..
ನೆರೆಹೊರೆಯವರ ಹೊಟ್ಟೆಕಿಚ್ಚು.!
2. ಅಸಾಧ್ಯ..!
ಕಾಳ್ಗಿಚ್ಚಿನಿಂದಲೂ ಪಾರಾದ
ಕಾನನಗಳು ಜಗದಲುಂಟು.?
ಹೊಟ್ಟೆಕಿಚ್ಚಿನಿಂದ ಬಚಾವಾದ
ಮನಗಳು ಇಳೆಯಲೆಲ್ಲುಂಟು.??
3 ಅಡ್ಡದಾರಿ..!
ಹಣ್ಣಿಗಾಗಿ ಮರವೇರಿ
ಪರಿಶ್ರಮಿಸುವವರಿಗಿಂತ
ಕೆಳಗೆ ನಿಂತು ಕಲ್ಲು
ಹೊಡೆವವರೇ ಹೆಚ್ಚು.!
4. ಅಸ್ತ್ರ..!
ಚುಚ್ಚಬೇಕೆಂದವರಿಗೆ
ಮುಳ್ಳುಗಳೇ ಬೇಕಿಲ್ಲ..
ಮಾತುಗಳು ಸಾಕು..!
ಕಿಚ್ಚು ಹಚ್ಚಬೇಕೆಂದವರಿಗೆ
ಬೆಂಕಿಹುಡಿಯೇ ಬೇಕಿಲ್ಲ
ಕಿಡಿನುಡಿಗಳೇ ಸಾಕು..!
5. ಅಸೂಯೆ..!
ಮೇಲೇರಿದವನ
ಮೆಚ್ಚುವುದಕಿಂತಲೂ
ಕಿಚ್ಚಿನಾ ನುಡಿಗಳಲಿ
ಚುಚ್ಚುವವರೇ ಹೆಚ್ಚು..!
-ಎ.ಎನ್.ರಮೇಶ್ ಗುಬ್ಬಿ.
*****