“21 ವರ್ಷದ ಹಿಂದೆ ನನ್ನ ಸ್ವರಚಿತ ಕವಿತೆಯ ಓದಿ, ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಮನದುಂಬಿ ಹರಸಿ ಆಶೀರ್ವದಿಸಿದ್ದರು, ಅವರ ಆ ಆಶೀರ್ವಾದ, ಅನುಗ್ರಹ, ಕಾರುಣ್ಯ ಇಂದಿಗೂ ನನ್ನ ಲೇಖನಿಗೆ ಚೈತನ್ಯವಾಗಿ ಹರಿಯುತ್ತಿದೆ. ಸ್ಫೂರ್ತಿಯಾಗಿ ಬರೆಸುತ್ತಿದೆ. ಕರುನಾಡಿನ ಹೆಮ್ಮೆಯ ಕವಿ ಚೆನ್ನವೀರ ಕಣವಿಯವರಿಗೆ ಅಂತರಾಳದ ಅನಂತ ಭಾಷ್ಪಾಂಜಲಿಗಳ ಕವನ. ನನ್ನೆದೆಯ ಅಶ್ರುತರ್ಪಣಗಳ ನುಡಿ ನಮನ. ಒಪ್ಪಿಸಿಕೊಳ್ಳಿ ಕಣವಿಯವರೇ..”
– ಹನಿಕಂಗಳಿಂದ ಎ.ಎನ್.ರಮೇಶ್. ಗುಬ್ಬಿ 👇
ಕಾವ್ಯಾಂಜಲಿ ಕಣವಿಯವರೇ..
ವಿಶ್ವಭಾರತಿಗೆ ಕನ್ನಡದಾರತಿ ಬೆಳಗಿದ
ಕರುನಾಡಿನ ಜೀವಸಂವೇದನಗಳ ಕವಿ
ಲೋಕಕೆಲ್ಲ ಕನ್ನಡಕಸ್ತೂರಿ ಪಸರಿಸಿದ
ಹೂಮನಸಿನ ಪ್ರೀತ್ಯಾದರಗಳ ಭಾವಜೀವಿ.!
ಸರಳತೆ ಸಜ್ಜನಿಕೆಗಳ ಸಾಕಾರ ಮೂರ್ತಿ
ಅನನ್ಯ ಸಾಧನೆಗಳ ಝೇಂಕಾರ ಕೀರ್ತಿ
ಕಿರಿಯರಿಗೆ ದಾರಿದೀಪವಾದ ಮಹಾಚೇತನ
ಕಾವ್ಯ ಸಿರಿಗಂಧದ ದಿವ್ಯ ಭವ್ಯನಿಕೇತನ.!
ನುಡಿನುಡಿಯಲ್ಲೂ ಹೊಂಬೆಳಕು ಚೆಲ್ಲುತ
ಸಾಹಿತ್ಯಲೋಕ ಬೆಳಗಿದ ಹುಣ್ಣಿಮೆಚಂದಿರ
ನಡೆನಡೆಯಲ್ಲೂ ಸುಸಂಸ್ಕಾರ ಬೀರುತ
ಆವರಿಸಿರುವೆ ಕನ್ನಡಿಗರ ಮನೋಮಂದಿರ.!
ಕಾವ್ಯರಸಿಕರ ಆಕಾಶಬುಟ್ಟಿಯಲ್ಲಿ ಕೂರಿಸಿ
ಮಧುಚಂದ್ರ ತೋರಿಸಿದ ಪದ ಗಾರುಡಿಗ
ಮಣ್ಣಿನ ಮೆರವಣಿಗೆಯಲಿ ಜೀವಧ್ವನಿ ಕೇಳಿಸಿ
ನೆಲ ಮುಗಿಲಲ್ಲು ಸುಮವರಳಿಸಿದ ಹೂವಾಡಿಗ.!
ಬರಡಾಯ್ತು ಇಂದು ಈ ಕನ್ನಡದ ಮಣ್ಣು
ಹನಿಯಾಯ್ತು ಕೋಟಿ ಕನ್ನಡಿಗರ ಕಣ್ಣು
ನೀರಸವಾಯ್ತು ಕವಿತೆ ಪದ್ಯಗಳ ನಂದನ
ನಿಸ್ಸಾರವಾಯ್ತು ಸಾಹಿತ್ಯಪ್ರಿಯರ ಹೃನ್ಮನ.!
ಮತ್ತೆ ಮತ್ತೆ ಹುಟ್ಟಿ ಬನ್ನಿ ಕಣವಿಯವರೇ
ಈ ನಾಡಿನ ಭಾಷೆ ಭಾವಗಳ ಬೆಳಗಲು
ಕಾವ್ಯಲೋಕದ ನಿಲ್ಲದ ಕಂಬನಿ ಅಳಿಸಲುತ
ಸಾಹಿತ್ಯಸಿರಿಯ ಸುಸಂಸ್ಕೃತಿ ಉಳಿಸಿ ಬೆಳೆಸಲು.!
-ಎ.ಎನ್.ರಮೇಶ್. ಗುಬ್ಬಿ.