ಕವಿ ಪರಿಚಯ: ನೂತನ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೆಚ್ಚಿನಬಂಡಿ ಗ್ರಾಮದ ಅಕ್ಷರ ವಂಚಿತ ದಂಪತಿ ತಾಯಪ್ಪ ಮತ್ತು ರೇಣುಕಮ್ಮ ಅವರ ಹಿರಿಯ ಪುತ್ರ ಮೂಗಪ್ಪ ಗಾಳೇರ ಪ್ರಸ್ತುತ ದಕ್ಷಿಣ ಕನ್ನಡದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿ.ಕಾಂ ಓದಿ ಉದ್ಯೋಗ ದೊರೆಯದೇ ಇದ್ದಾಗ ದೂರದ ಮಂಗಳೂರಿಗೆ ಗಾರೆ ಕೆಲಸಕ್ಕೆ ಹೋಗಿ, ಕೂಲಿ ನಾಲಿ ಮಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆ ಬರೆದು ತನ್ನ ನೆಚ್ಚಿನ ಪೊಲೀಸ್ ಪೇದೆ ಹುದ್ದೆಯನ್ನು ಗಿಟ್ಟಿಸಿಕೊಂಡ ಕವಿ ಮೂಗಪ್ಪ.
2016 ರಲ್ಲಿ “ಮಿಡಿದ ಹೃದಯದ ಅಲೆಗಳು” ಕವನ ಸಂಕಲನ ಪ್ರಕಟಿಸಿದ್ದಾರೆ. ಮೂಕವೇದನೆ,
ಕರಿ ಗುಡ್ಡದ ಮೇಲಿನ ಜೋಡಿ ಕೊಲೆ (ಕಾದಂಬರಿ),
ವೀಸಾ ಮತ್ತು ಹೃದಯದ ಜಾತ್ರೆ (ಕವನ ಸಂಕಲನ)
ಕೃತಿಗಳನ್ನು ಸಿದ್ಧಪಡಿಸಿಕೊಂಡು ಪ್ರಕಟಿಸುವ ಪ್ರಕಾಶಕರಿಗಾಗಿ ಎದುರು ನೋಡುತ್ತಿದ್ದಾರೆ.
ಇಂದಿನ ಅನುದಿನ ಕವನದ ಗೌರವಕ್ಕೆ ಮೂಗಪ್ಪ ಗಾಳೇರ ಅವರ ಹೊಸ ಕಳೆ ಕವಿತೆ ಪಾತ್ರವಾಗಿದೆ. 👇
ಹೊಸ ಕಳೆ
ಹಸಿರೆಲೆಗಳ ಹೂದೋಟದ ನಡುವೆ
ಕಂಗೊಳಿಸುತ್ತಾ ಹೃದಯದ ಬಾಗಿಲಿಗೆ ಬಂದವಳೇ
ನನ್ನ ಕವಿತೆ ಸಾಲದು ಸ್ವಾಗತಿಸಲು ನಿನ್ನಾ
ಬಯಲು ಬಾನಿನ ಹಣೆಯ ಮೇಲೆ
ತಿಲಕವನಿಟ್ಟ ಚೆಂದಿರನೊಂಚೂರು ಕೇಳುವೆ
ನನ್ನವಳ ದೃಷ್ಟಿ ಬೊಟ್ಟು ನೀನಾಗುವೆಯಾ ಎಂದು
ಒಂದೆರಡು ಪದಗಳಲ್ಲಿ ಬರೆದು ಮುಗಿಸಲೆಂದು
ಕೈಗೆತ್ತಿಕೊಂಡ ಹೊತ್ತಿಗೆಗೀಗ
ಸಾವಿರ ಕವಿತೆಗಳ ಸಂಭ್ರಮ
ಒಂಟಿಯಾಗಿ ಹರಿಯುವ ನದಿಗಳಿಗೆಲ್ಲಾ
ನಿನ್ನ ಮಡಿಲಲ್ಲಿ ಮಲಗುವ ಬಯಕೆ ಇರುವಾಗ
ಮರೆಯದೆ ಕರುಣಿಸು ಗೆಳತಿ
ಈ ಕವಿಗೂ ಒಂಚೂರು ಮೌನ ರಾಗ
ನೀ ಬರುವ ಹಾದಿ ಉದ್ದಕ್ಕೂ
ಮಳೆ ಹನಿಯ ಮಲ್ಲಿಗೆಯ ಹಾಸಿರುವೆ
ಒಳ ಬಂದ ಮೇಲೆ ಮರೆಯದಿರು
ನಾನಿಟ್ಟ ಮೋಟು ಗೋಡೆಯ ಮೇಲಿನ ಹಣತೆ
ನಮ್ಮಿಬ್ಬರನೂ ಬಿಟ್ಟರೆ ಅಲ್ಲಿಲ್ಲಾ ಯಾರು
ಧರೆಗಿಳಿದು ಬರಲಾರರು ಸೂರ್ಯ-ಚಂದ್ರಮರು
ಒಳಕೋಣೆಯ ದೀಪದ ಬೆಳಕಿನಲಿ
ಹುಣ್ಣಿಮೆಯ ಚೆಲುವು ಹೊತ್ತು ತಂದ
ಒಂಟಿ ಪದಗಳನ್ನೆ ಬೆಸೆಯುತ್ತಾ
ನಸು ರಾತ್ರಿಯ ಕತ್ತಲೆಯಲಿ
ಮಂಪರಿನ ಕವಿ ನಾನದಾಗ
ಮೂಲೆಯಲಿ ಕುಳಿತ ತಂಬೂರಿಗೆ
ಎಲ್ಲಿಲ್ಲದ ಹೊಸ ಕಳೆ………!
✍ ಮೂಗಪ್ಪ ಗಾಳೇರ
(ಪೊಲೀಸ್ ಇಲಾಖೆ, ಮಂಗಳೂರು)
ಹಗರಿಬೊಮ್ಮನಹಳ್ಳಿ
*****