ನೀಲಿ ಬಯಲು
ಅನ್ಯಾಯದ ಅವ್ಯವಸ್ಥೆಗೆ
ಕೊಲ್ಲುವ ಮನಗಳಿಗೆ
ಹೋರಾಟದ ಕಿಚ್ಚು ನೀಲಿ ಬಯಲು.
ಬಸ್ಸು-ಕಾರುಗಳ ಮೆರವಣಿಗೆ
ಕಾಲ್ನಡಿಗೆಯ ಮೌನ ಬರವಣಿಗೆ
ಮಿಂಚಿನ ಶಾಲುಗಳ ನೀಲಿ ಬಯಲು.
ಒಂದೇ ಒಂದೇ ಜೈಕಾರವೊಂದೇ
ಜಯ ಜಯ ಜೈ ಭೀಮ್ ಎನ್ನುವುದೊಂದೇ
ಭೀಮ ಘೋಷದ ನೀಲಿ ಬಯಲು.
ಮಲಗಿದ್ದವರು ಎದ್ದಿದ್ದಾರೆ
ಕುಳಿತ್ತಿದ್ದವರು ನಿಂತಿದ್ದಾರೆ
ಇನ್ನು ಜಗವೆಲ್ಲ ನೀಲಿ ಬಯಲು.
ಧಿಕ್ಕಾರ ದೌರ್ಜನ್ಯಕ್ಕೆ
ಜೈಕಾರ ಸಂವಿಧಾನಕ್ಕೆ
ಪ್ರೀತಿ- ಕಾರುಣ್ಯದ ನೀಲಿ ಬಯಲು.
ಹೋರಾಟದ ರಥವೀಗ
ಮುನ್ನುಗುತ್ತಿದೆ ನೋಡೀಗ
ಬುದ್ದ ಭಾರತದ ನೀಲಿ ಬಯಲು.
ಎಲ್ಲೆಲ್ಲೂ ಬಾಬಾಸಾಹೇಬರ ಪಟ
ಹುಟ್ಚಲಿದೆ ನವಚೈತನ್ಯವು ದಿಟ
ಒಳಗು-ಹೊರಗೆಲ್ಲಾ ನೀಲಿ ಬಯಲು.
ಕ್ರಾಂತಿಯ ಹಾಡಿಗೆ
ಶಾಂತಿಯ ಹೆಜ್ಜೆ ಹೆಜ್ಜೆ
ಬಾನೆತ್ತರದ ನೀಲಿ ಬಯಲು.
ಭೀಮನ ಹೆಸರ ಉಸಿರು
ಬುದ್ಧನ ಉಸಿರ ಹೆಸರು
ಧಮ್ಮವೇ ಅಂತಿಮ-ಅನನ್ಯ
ನಾಗ ಜನರ ನೀಲಿ ಬಯಲು
– ಡಾ. ಬಿ. ಆರ್. ಕೃಷ್ಣಕುಮಾರ್,
ಚಾಮರಾಜ ನಗರ
*****