ಹೊಸಪೇಟೆ, ಫೆ.21: ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬರೂ ತಾಯ್ನುಡಿ ಭಾಷೆಯ ಉಳಿವಿಗಾಗಿ ನಿರಂತರ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ದಾವಣಗೆರೆ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ. ನಾರಾಯಣಸ್ವಾಮಿ ಅವರು ತಿಳಿಸಿದರು.
ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗ, ಐ.ಕ್ಯು.ಎ.ಸಿ ಹಾಗೂ ಅತ್ತಿಹಳ್ಳಿ ನುಡಿ ಪ್ರತಿಷ್ಠಾನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಜರುಗಿದ ‘ವಿಶ್ವ ತಾಯ್ನುಡಿ ದಿನಾಚರಣೆ’ಯಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದರು.
ತಾಯ್ನುಡಿ ಬೆಳೆಸುವ ನಿಟ್ಟಿನಲ್ಲಿ ಹಿಂದಿಯ ಏರಿಕೆಯನ್ನು ನಿರಾಕರಿಸಬೇಕು ಎಂದು ಹೇಳಿದರು.
ದೇಶದ ಭಾಷಾ ಯೋಜನೆ, ಭಾಷಾ ನೀತಿ ಸ್ಪಷ್ಟವಾಗಿಲ್ಲ ಎಂದು ಟೀಕಿಸಿದರು.
ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಜೀವಂತ ಭಾಷೆ. ಯಾವುದೇ ಧಕ್ಕೆ ಇಲ್ಲ. ಕನ್ನಡ ಭಾಷೆ ಉಳಿದು ಬೆಳೆಯುತ್ತದೆ ಆದರೆ ಹಲವು ಸವಾಲುಗಳನ್ನು ಎದುರಿಸ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ಆರನೂರು ವರ್ಷಗಳ ಇತಿಹಾಸ ಹೊಂದಿರುವ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹೇಳುವುದು ಕುಚೋದ್ಯವೇ ಸರಿ. ಕನ್ನಡ, ತಮಿಳು, ತೆಲುಗು ಭಾಷೆಯಂತೆ ಹಿಂದಿ ಒಂದು ದೇಶದ ಭಾಷೆ ಅಷ್ಟೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿ ಭಾಷೆಯಲ್ಲಿ ಬರೆಯಲು ಅವಕಾಶ ಇರುವುದರಿಂದ ಉತ್ತರ ಭಾರತದ ವರು ಉದ್ಯೋಗದಲ್ಲಿ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂದು ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಬಿ. ಜಿ. ಕನಕೇಶಮೂರ್ತಿ ಅವರು ಮಾತನಾಡಿ, ಯಾವುದೇ ಭಾಷೆ ಬಳಸುವುದರಿಂದ, ಮಾತನಾಡುವದರಿಂದ ಉಳಿಯುತ್ತದೆ. ವಿದ್ಯಾರ್ಥಿಗಳು ಕಾಲೇಜಿನ ಗ್ರಂಥಾಲಯವನ್ನು ಉತ್ತಮವಾಗಿ ಬಳಕೆ ಮಾಡಿಕೊಂಡು ಜ್ಞಾನಾರ್ಜನೆ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಸಾಪ ಪ್ರಕಟಿಸಿರುವ ಎಂಟು ಸಂಪುಟಗಳನ್ನು ವಿದ್ಯಾರ್ಥಿಗಳು ಮಾತ್ರವಲ್ಲ ಹೆಚ್ಚಿನ ಸಂಖ್ಯೆಯ ಕನ್ನಡದ ಅಧ್ಯಾಪಕರೇ ಬಳಸಿರುವುದಿಲ್ಲ ಎಂದು ವಿಷಾಧಿಸಿದರು.
ಐ.ಕ್ಯು.ಎ..ಸಿ ಸಂಚಾಲಕ ಡಾ. ಟಿ ಎಚ್ ಬಸವರಾಜ್ ಮಾತನಾಡಿ ವ್ಯಕ್ತಿತ್ವ ಬೆಳೆಯುವಲ್ಲಿ ಮಾತೃ ಭಾಷೆಯ ಪಾತ್ರ ಹಿರಿದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಮಲ್ಲಿಕಾರ್ಜುನಯ್ಯ, ಡಾ. ಕೆ. ವೆಂಕಟೇಶ್, ಉಪನ್ಯಾಸಕರುಗಳಾದ ಮುರಳೀಧರ, ಸಿ.ಮಂಜುನಾಥ್, ಡಾ. ಷಣ್ಮುಖಪ್ಪ, ಉಜ್ಜಪ್ಪ, ಡಾ. ನಾಗವೇಣಿ ಮತ್ತಿರರು ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗಣ್ಣ ಕಿಲಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನುಡಿ ಪ್ರತಿಷ್ಠಾನದಿಂದ ಕನ್ನಡ ವಿಭಾಗಕ್ಕೆ ನೀಡಿದ ಕನ್ನಡ ನಿಘಂಟುಗಳನ್ನು ವಿಭಾಗದ ಮುಖ್ಯಸ್ಥರು, ಪ್ರಾಚಾರ್ಯರರು ಸ್ವೀಕರಿಸಿದರು. ಎನ್. ತಾಯಶ್ರೀ ಅತಿಥಿಗಳನ್ನು ಪರಿಚಯಿಸಿದರು.ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಡಾ. ರಕ್ಷಿತ್ ಅ. ಪ ವಂದಿಸಿದರು.
ವಿದ್ಯಾರ್ಥಿ ನಾಗರಾಜ ಗಂಟಿ ನಿರೂಪಿಸಿದರು.
*****