ಭಾವನೆಗಳ ಬಿರುಗಾಳಿ
ಎದ್ದ ಭಾವನೆಗಳ ಬಿರುಗಾಳಿ
ಬಿಡಿಸುವುದು ಕೊರೆವ ಮೈಚಳಿ
ಹರಿಸುವುದು ಬೆಚ್ಚನಾಸೆಗಳ ಹೊಳಿ.
ಮನದಲ್ಲಿ ಸುರಿದರೆ ಹೂಮಳಿ
ಹೃದಯದಲ್ಲಿ ಹರಿವುದು ಪ್ರೀತಿ ಹೊಳಿ
ಮನಸುಗಳಿಗೆ ಹಾಕುವುದು ಬಂಧನದ ಗುಳಿ.
ಘಮ ಘಮಿಸುವ ಗಂಧ
ಜಾಜಿ ಮಲ್ಲಿಗೆಯ ಹೂವು ಚಂದ
ಇಳಕಲ ಸೀರೆಯುಟ್ಟ ಚೆಲುವೆ ಅಂದ.
ಹೊಳೆಯುವ ನವಿಲ ಗರಿ
ಮಿನುಗು ತಾರೆ ಮನಸೆಳೆಯುವ ಪರಿ
ಜುಳು ಜುಳು ಹರಿಯುವ ನೀರಿನ ಝರಿ.
ಮುಂಜಾನೆ ಸುರಿವ ಇಬ್ಬನಿ
ಭುವಿಗೆ ತಂಪನೆರೆವ ಮಳೆ ಹನಿ
ನೆರಳು ನೀಡುವುದು ಮನಸಿನ ಮನಿ.
ಅರಳಿದ ಮಲ್ಲಿಗೆ ಹೂವು
ಚೈತ್ರಕ್ಕೆ ಚಿಗುರಿದ ಎಳೆ ಮಾವು
ಮರೆಸುವವು ಮನಸಿನ ನೋವು.
ಮೈ ಸವರುವ ತಂಗಾಳಿ
ಆಸೆಗಳ ಬಡಿದೆಬ್ಬಿಸುವ ಪಾಳಿ
ಮರ ಮುಪ್ಪಾದರೂ ಕರಗದು ಚಾಳಿ
-ಡಾ.ಅಶೋಕಕುಮಾರ ಎಸ್. ಮಟ್ಟಿ ಮೀನಕೇರಿ. ಪ್ರಾಧ್ಯಾಪಕರು ಸರಕಾರಿ ಪದವಿ ಕಾಲೇಜು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಯಾದಗಿರಿ.
*****