ಅನುದಿನ ಕವನ-೪೨೧, ಕವಿ: ಎಚ್.ಎಂ. ಮಹೇಂದ್ರ ಕುಮಾರ್, ಬಳ್ಳಾರಿ ಕವನದ ಶೀರ್ಷಿಕೆ: ಕಳೆಯುತ್ತಿವೆ

ಕಳೆಯುತ್ತಿವೆ

ಬಟಾ ಬಯಲಲ್ಲಿ
ಬಾಲ್ಯ, ಯೌವ್ವನ, ಮುಪ್ಪು
ಕಳೆಯುತ್ತಿವೆ

ಬದುಕಲಾಗದೇ
ನರಳುತ್ತಿವೆ
ಕರುಳಬಳ್ಳಿಯ
ಕೊಂಡಿಗಳು

ಹಣ, ಅಧಿಕಾರ, ಅಂತಸ್ತು
ಹೆಣ್ಣು – ಹೊನ್ನು : ಮಣ್ಣಲಿ
ಸ್ವಪ್ರತಿಷ್ಠೆಯ ಹೆಗ್ಗಳಿಕೆಯಲಿ
ಕಳೆಯುತ್ತಿವೆ ಪರಹಿತ
ಪರಮತ, ಮಾನವೀಯತೆ

ದಶಕಗಳೇ ಉರುಳಿದವು
ಹರುಷ ಕಳೆದು,
ನಗುವು ಮರೆತು
ಹೀಗ್ಹೇಕೆ, ಈ ಬದುಕು?

ಸುಳ್ಳಿನ ಸುಗ್ಗಿಯಲೇ
ದಿಗಲುಟ್ಟಿಸುತ್ತಿರುವ
ರಾಶಿ ರಾಶಿ ಮಾತುಗಳಲ್ಲಿ
ರಕ್ತಕಾರುತ್ತಿದೆ
ಕಣ್ಣೀರು ಸುರಿಯುತ್ತಿದೆ

ಪ್ರಜಾಪ್ರಭುತ್ವ
ವಾಲಿ: ನಿರಂಕುಶಾಡಳಿತ
ಥಕಥೈ – ಥಕಧಿಮಿಥೈ
ಎಂದು ಕುಣಿಯುತ್ತಿದ್ದರೂ
ಕಳೆದುಹೋಗಿವೆ
ಎದೆಗೂಡ ಗಟ್ಟಿದನಿಗಳು
ಕಣ್ಣೀರ ಹನಿಯಲಿ

-ಎಚ್.ಎಂ. ಮಹೇಂದ್ರ ಕುಮಾರ್,
ಪತ್ರಕರ್ತ, ಬಳ್ಳಾರಿ