ಅನುದಿನ‌ ಕವನ-೪೨೫, ಕವಯತ್ರಿ: ವಿನುತಾ, ಬೆಂಗಳೂರು, ಕವನದ ಶೀರ್ಷಿಕೆ: ಶಿವನೆಂದರೆ ಸರ್ವಸ್ವವೂ!!

ಶಿವನೆಂದರೆ ಸರ್ವಸ್ವವೂ!!

ಶಿವನ ಸಾನಿಧ್ಯದಲ್ಲಿ
ತಾಂಡವವೂ ಇದೆ
ಧ್ಯಾನವೂ,
ಕತ್ತಲೂ ಇದೆ
ಬೆಳಕೂ,
ಜೀವನವೂ ಅವನದ್ದೇ
ಮರಣವೂ,
ರಾಮನೂ ಅವನ ಸ್ವಂತವೇ
ರಾವಣನೂ,
ಅಜ್ಞಾನಿಯ ಜ್ಞಾನವೂ ಶಿವನೇ!!

ಬಡವರಲ್ಲಿ
ಹಸಿದವರಲ್ಲಿ
ಅಸಹಾಯಕರಲ್ಲಿ
ಒಡೆದ ಹೃದಯಗಳಲ್ಲಿ
ಅವ ನೆಲೆಸಿದ್ದಾನೆ!!

ವೈಭವವನ್ನೆಲ್ಲ ತ್ಯಜಿಸಿ
ವೈರಾಗ್ಯವನ್ನು ಗೆದ್ದವನಿಗೆ,
ಅಮೃತದ ಬದಲು
ವಿಷವನ್ನೇ ಕುಡಿದವನಿಗೆ
ಬೇರೇನನ್ನು ಅರ್ಪಿಸಲಿ!!

ಈ ಜಗತ್ತು ಕೊಟ್ಟ ನಂಜನ್ನೆಲ್ಲ ಕುಡಿದೂ
ನಾನಿನ್ನೂ ಬದುಕಿದ್ದೇನೆಂದರೆ,
ನನ್ನಾತ್ಮದ ಕಣಕಣದಲ್ಲೂ
ಅವನಿರುವಿಕೆಯೇ ಕಾರಣ!!

ಅವ ಎಷ್ಟು ಸರಳವೋ,
ಅವನನ್ನು ಅರ್ಥೈಸಿಕೊಳ್ಳುವುದು
ಅಷ್ಟೇ ಕಠಿಣ,
ಅವನನ್ನು ಪ್ರೀತಿಸುವವರನ್ನು
ಅರ್ಥೈಸಿಕೊಳ್ಳುವುದು
ಮತ್ತಷ್ಟು ಜಟಿಲ!!

ಸ್ವರ್ಗದ ಆಸೆಯಿರಲಿಲ್ಲ,
ಅವನ ಸಾನಿಧ್ಯಕ್ಕೆ ಹಪಹಪಿಸಿದ್ದೆ,
ಒಳಗೇ ನೆಲೆಸಿರುವ ಅವನನ್ನು
ಎಲ್ಲೆಲ್ಲೂ ಹುಡುಕುವುದಿಲ್ಲ ಈಗ!!

-ವಿನುತಾ ✍️, ಬೆಂಗಳೂರು