ಉಜ್ವಲ ಭವಿಷ್ಯದ ಕನಸು ಕಾಣುತ್ತಿರುವ ಪಾಲಕರ ನಂಬಿಕೆ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಶ್ರಮಿಸಬೇಕು -ಧರ್ಮೇಂದ್ರ ಸಿಂಗ್

ಹೊಸಪೇಟೆ, ಮಾ.2: ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯದ ಬಗ್ಗೆ ತಂದೆ ತಾಯಿಗಳು ಕಾಣುತ್ತಿರುವ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು ಎಂದು ಶ್ರೀ ಶಂಕರ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧರ್ಮೇಂದ್ರ ಸಿಂಗ್ ಹೇಳಿದರು.
ಬಳ್ಳಾರಿಯ ನೆಹರು ಯುವ ಕೇಂದ್ರ, ನಗರದ ಶ್ರೀ ಶಂಕರ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಮಹರ್ಷಿ ವಾಲ್ಮೀಕಿ ಯುವಕರ ಸಂಘ, ರಾಮಸಾಗರದ ವಿವೇಕಾನಂದ ಯೂಥ್ ಅಸೋಶಿಯೇಷನ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ನೆರೆ ಹೊರೆ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಮಕ್ಕಳ ಬಗ್ಗೆ ಪಾಲಕರು ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಬೇಡಿ ಎಂದು ತಿಳಿಸಿದರು.
ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ನಗರ ಶಾಸಕರೂ ಆಗಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ತುಂಬಾ ಕಾಳಜಿ ಹೊಂದಿದ್ದು, ಶೀಘ್ರ ಕಾಲೇಜ್ ಕ್ಯಾಂಟೀನ್, ಆಡಿಟೋರಿಯಂ ಮತ್ತಿತರ ಅಗತ್ಯ ಕಟ್ಟಡ ನಿರ್ಮಾಣಕ್ಕೆ ನೀಲಿ‌ನಕ್ಷೆ ಸಿದ್ಧಪಡಿಸಲು ಸೂಚಿಸಿದ್ದಾರೆ. ಅಂತೆಯೇ ಸಮಿತಿ ಕಾರ್ಯಪ್ರವೃತ್ತವಾಗಿದೆ ಎಂದರು.
ವಿಧಾನ ಮಂಡಲದಲ್ಲಿ ಮಂಡನೆಯಾಗುತ್ತಿರುವ ಆಯವ್ಯಯ ಕಾರ್ಯಕಲಾಪ ವೀಕ್ಷಿಸಲು ಕಾಲೇಜಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಆಸಕ್ತರ ಪ್ರಯಾಣದ ಖರ್ಚನ್ನು ತಾವೇ ಭರಸುತ್ತೇವೆ ಎಂದು ಧರ್ಮೇಂದ್ರ ಸಿಂಗ್ ಹೇಳಿದರು.


ಪ್ರಾಸ್ತವಿಕವಾಗಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ. ವೆಂಕಟೇಶ್ ಅವರು, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ದೇಶ ಮೆಚ್ಚುವ ರೀತಿಯಲ್ಲಿ ಕ್ರಿಯಾಶೀಲ, ರಚನಾತ್ಮಕ ಚಟುವಟಿಕೆಯಲ್ಲಿ ವಿದ್ಯಾರ್ಥಿ ಯುವಜನರು ತೊಡಗಿಸಿ ಕೊಳ್ಳಬೇಕು ಎಂದು ತಿಳಿಸಿದರು.
ನ್ಯಾಯವಾದಿ ಹೆಚ್.ಪಿ ಕಲ್ಲಂಭಟ್ ಮಾತನಾಡಿ ಯುವಶಕ್ತಿ ಜಾಗೃತಗೊಳ್ಳಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ಜೀವನ ಚಿಕ್ಕದು, ಸಾಧನೆ ದೊಡ್ಡದು. ಯುವ ಸಮೂಹ ಸಿಕ್ಕಿರುವ ಅವಕಾಶ ಬಳಸಿಕೊಂಡು ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ತಾಲೂಕು ವೈದ್ಯಾಧಿಕಾರಿ ಟಿ.ಎಚ್ ಭಾಸ್ಕರ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ. ಆಯೋಗದದ ಸದಸ್ಯ ಹೆಚ್.ಸಿ ರಾಘವೇಂದ್ರ, ಕೃಷಿ ಅಧಿಕಾರಿ ಎಲ್.ವೆಂಕಟೇಶ್, ಆರ್ ಸೆಟಿ ತರಬೇತುದಾರ ಜಿ. ಜಡೇಶ, ಎನ್ ವೈ ಕೆ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಂಟು ಪತ್ತಾರ್ ಮಾತನಾಡಿದರು.


ವಿಜಯನಗರ ಕಾಲೇಜಿನ ಪ್ರಾಚಾರ್ಯ ಪ್ರಭಯ್ಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ ಕನಕೇಶ ಮೂರ್ತಿ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನ ಪೀಠಿಕೆ ಬೋಧಿಸಿದರು.


ನಗರ ಸಭೆ ಅಧ್ಯಕ್ಷೆ ಸುಂಕಮ್ಮ, ಸಂಘದ ಅಧ್ಯಕ್ಷೆ ಗುಂಡಿ ಭಾರತಿ ರಮೇಶ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ. ಟಿ. ಎಚ್. ಬಸವರಾಜ್, ಗುಲ್ಬರ್ಗ ವಿವಿ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ಸಾಹಸ ನಿರ್ದೇಶಕ ಯೇಸೂಫ್, ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಕವಿಗಳಾದ ಕವಿ ಪರಶುರಾಮ್, ಬಸವರಾಜ್ ಕವನ ವಾಚಿಸಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ತಾಲೂಕು ಅಧ್ಯಕ್ಷ ಗುಂಡಿ ರಮೇಶ್ ಸ್ವಾಗತಿಸಿದರು. ವಿದ್ಯಾ ಚೇತನ ಶಾಲೆಯ ಕಾರ್ಯದರ್ಶಿ ಹನುಮಂತಪ್ಪ ಡಿ ನಿರೂಇಸಿದರು ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಪಿ. ಪರಶುರಾಮ್ ವಂದಿಸಿದರು. ಇಮ್ತಿಯಾಜ್ , ಬಿ ಶ್ರೀನಿವಾಸ್, ಡ್ಯಾನ್ಸ್ ಹರಿಪ್ರಸಾದ್, ಪ್ರಕಾಶ್ ಬಾಬು, ವಿಜಯಕುಮಾರ್, ನಿರ್ವಹಿಸಿದರು.