ಹೊಸಪೇಟೆ ಎಸ್.ಎಸ್.ಎ.ಎಸ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ರಂಗ ಸಂಭ್ರಮ

ಹೊಸಪೇಟೆ, ಮಾ.೮: ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ವಿದ್ಯಾರ್ಥಿಗಳು
ಆಟ ಪಾಠದ ಜತೆ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.


ಹೌದು! ಕಳೆದ ಹದಿನೈದು ದಿನಗಳಿಂದ ಕಾಲೇಜಿನ ಎರಡನೆಯ ಮಹಡಿಯ ವಿಶಾಲವಾದ ಕೊಠಡಿಯೊಂದು ರಂಗ ತಾಲೀಮಿನ ವೇದಿಕೆಯಾಗಿ ಬದಲಾಗಿದೆ.


ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ. ನಾಗಣ್ಣ ಕಿಲಾರಿ ಅವರು ತಮ್ಮ ಅಧ್ಯಾಪನ ಜತೆ ಏಕಲವ್ಯ ನಾಟಕದ ರಂಗ ತಾಲೀಮಿನ ಉಸ್ತುವಾರಿ ಹೊತ್ತಿದ್ದಾರೆ. ನೀನಾಸಂ ನಲ್ಲಿ ತರಬೇತಿ ಪಡೆದಿರುವ ಮರಿಯಮ್ಮನಹಳ್ಳಿ ಯುವ ರಂಗ ಪ್ರತಿಭೆ ಬಿ.ಸರ್ದಾರ್ ನಿರ್ದೇಶನದಲ್ಲಿ ಎಂಟು ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 15 ವಿದ್ಯಾರ್ಥಿಗಳು ನಾಟಕದ ಮಾತು, ನಟನೆ, ಹಾಡು, ಕುಣಿತ ಕಲಿತು ಮರಿಯಮ್ಮನಹಳ್ಳಿಯಲ್ಲಿ ಇದೇ ಗುರುವಾರ(ಮಾ.10) ಕಾಲೇಜು ರಂಗೋತ್ಸವದಲ್ಲಿ ಭಾಗವಹಿಸಿ ಯಶಸ್ವಿ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.


ಕಾಲೇಜಿನ ಪ್ರಾಚಾರ್ಯ ಡಾ. ಬಿ. ಜಿ ಕನಕೇಶ ಮೂರ್ತಿ ಅವರು ಹಿರಿಯ ಅಧ್ಯಾಪಕರ ಜತೆ ಶನಿವಾರ ಗಂಟೆಗಳ ಕಾಲ ರಂಗ ತಾಲೀಮನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು, ಮೊದಲ ಬಾರಿ ಅಭಿನಯಿಸುತ್ತಿರುವದರಿಂದ ಸಣ್ಣ ಪುಟ್ಟ ತಪ್ಪುಗಳು ಸಹಜ. ತಿದ್ದಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ‌ ಜೋಷಿ ಅವರು ಕರ್ನಾಟಕ ಕಹಳೆ ಡಾಟ್ ಕಾಮ್  ಜತೆ ಮಾತನಾಡಿ,
ಕಾಲೇಜು ವಿದ್ಯಾರ್ಥಿಗಳ ಮನೋವಿಕಾಸ ಹಾಗೂ ಶೈಕ್ಷಣಿಕ ಕಲಿಕಾ ಸಾಮರ್ಥ್ಯ ವನ್ನು ಹೆಚ್ಚಿಸಲು ಈ ರಂಗ ತರಬೇತಿ ಸಹಕಾರಿಯಾಗಲಿದೆ. ಕಲಬುರಗಿ ರಂಗಾಯಣದ ಮೂಲಕ  ಕಲ್ಯಾಣ ಕರ್ನಾಟಕ ಎಲ್ಲಾ ಜಿಲ್ಲೆಗಳಲ್ಲಿ ರಂಗ ತರಬೇತಿ‌ ನೀಡಲಾಗುತ್ತಿದೆ ಎಂದರು.


ಮತ್ತೋರ್ವ ನಿನಾಸಂ ಪದವೀಧರ ಸಾಗರದ ಸತೀಶ್ ಅವರು ರಂಗ ಸಜ್ಜಿಕೆಯ ಹೊಣೆ ಹೊತ್ತಿದ್ದಾರೆ.
ಇಪ್ಪತ್ತು ದಿನಗಳ ಹಿಂದೆ ನಟನೆ, ಹಾಡು, ಕುಣಿತ ಎಳ್ಳಷ್ಟು ಗೊತ್ತಿರಲಿಲ್ಲ. ನಾಟಕದ ಬಗ್ಗೆ ಏನೂ ಗೊತ್ತಿಲ್ಲದ ತಮಗೆ ರಂಗಭೂಮಿ ನಂಟು ಖುಷಿ ನೀಡಿದೆ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

(ವಿಶೇಷ ವರದಿ: ಸಿ.ಮಂಜುನಾಥ, ಬಳ್ಳಾರಿ)
*****