ಗಜಲ್
ಚೂರಿ ಇರಿದು ಗಾಯ ಮಾಡಿದವರೇ ಮುಲಾಮಿನ ಬಗೆಗೆ ಮಾತನಾಡುತ್ತಿದ್ದಾರೆ ಏನು ಮಾತನಾಡಲಿ
ನೆತ್ತರು ಹೀರಿ ಚಪ್ಪರಿಸಿ ಕುಡಿದವರೇ ಮರುಕಪಡುತ್ತಿದ್ದಾರೆ ಏನು ಮಾತಾನಾಡಲಿ
ನೆರಳಿಗೂ ಹೇಸುತಿದ್ದವರು ನೆರಳಾಗುವೆವೆಂದು ಬೀಗುವತ್ತಿರುವ ಗಳಿಗೆ ಗೆಳೆಯ
ಕಂಗಳಿಂದ ಕಂಬನಿ ತರೆಸಿದವರೇ ಕಣ್ಣೀರು ವರೆಸುವ ನಾಟಕವಾಡುತ್ತಿದ್ದಾರೆ ಏನು ಮಾತಾಡಲಿ
ನಾಲಿಗಿಗೆ ಬಣ್ಣ ಬದಲಿಸುವ ಕಲೆ ಕಲಿಸಿದ್ದು ಹಳೆಯ ಮಾತಲ್ಲವೇ..?
ತುಟಿಗಳಿಂದ ನಗುವ ಕಸಿದುಕೊಂಡವರೇ ತುಟಿಗೆ ರಂಗು ತುಂಬುತ್ತಿದ್ದಾರೆ ಏನು ಮಾತಾಡಲಿ
ಬೀಗ ಜಡಿದವರೇ ಬಾಗಿಲು ತೆರೆಯುವವ ಬಗೆಗೆ ಪುಂಗುತ್ತಿದ್ದಾರಲ್ಲವೇ..?
ಬೇಲಿ ಹಾಕಿದವರೇ ಮುಳ್ಳಿನ ಅಪಾಯದ ಕುರಿತು ಭಾಷಣಮಾಡುತ್ತಿದ್ದಾರೆ ಏನು ಮಾತನಾಡಲಿ
ಶತ ಶತ ಮಾನದ ಇತಿಹಾಸವಿದೆ ನನ್ನ ನಿನ್ನ ಎದೆಯ ಗೋಡೆಯ ಮೇಲಲ್ಲವೇ..?
‘ದೇವ’ರ ಹೆಸರಲ್ಲಿ ಲೂಟಿ ಮಾಡಿದವರು ಕಳ್ಳರ ಬಗೆಗೆ ಎಚ್ಚರವಿರಲ್ಲೆನ್ನುತ್ತಿದ್ದಾರೆ ಏನು ಮಾತನಾಡಲಿ
– ದೇವರಾಜ್ ಹುಣಸಿಕಟ್ಟಿ, ರಾಣೆಬೆನ್ನೂರು
*****