ಬಳ್ಳಾರಿ, ಮಾ.10: ಛಾಯಾಚಿತ್ರ ವಿಶ್ವದ ಭಾಷೆ ಎಂದು ಪತ್ರಿಕಾ ಛಾಯಾಗ್ರಾಹಕ, ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅಭಿಪ್ರಾಯ ಪಟ್ಟರು.
ಹೊಸಪೇಟೆಯ ಶ್ರೀಶಂಕರ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಗುರುವಾರ ಛಾಯಾಗ್ರಾಹಣ ಮಹತ್ವದ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಫೋಟೊ ವಿಶ್ವದ ಯಾವುದೇ ಭಾಷೆಯ ಜನರಿಗೆ ಅರ್ಥವಾಗುತ್ತದೆ. ಅನಕ್ಷರಸ್ಥರು ಕೂಡಾ ಫೋಟೊದಲ್ಲಿರುವುದನ್ನು ಅರ್ಥೈಸಿ ಕೊಳ್ಳಬಲ್ಲರು ಎಂದು ತಿಳಿಸಿದರು.
ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಹೀಗಾಗಿ ಛಾಯಾಗ್ರಹಣ, ಛಾಯಾಗ್ರಾಹಕನಿಂದ ಶಿಸ್ತು, ಶ್ರದ್ಧೆ, ಪರಿಶ್ರಮ ಬೇಡುತ್ತದೆ ಎಂದು ತಮ್ಮ ಎರಡು ದಶಕಗಳ ಅನುಭವಗಳ ಬುತ್ತಿಯನ್ನು ಬಿಚ್ಚಿಟ್ಟರು.
ವರದಿಗಾರ ಮತ್ತು ಛಾಯಾಗ್ರಾಹಕ ಸ್ನೇಹ, ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಹೆಚ್ಚಿಸಿ ಕೊಳ್ಳಬೇಕು. ಬರವಣಿಗೆ, ಫೋಟೊಗ್ರಫಿಯ ಬಗ್ಗೆ ಕೌಶಲ್ಯ ಗಳಿಸಿದರೆ ಉದ್ಯೋಗ ಸುಲಭವಾಗಿ ದೊರೆಯುತ್ತದೆ ಎಂದು ಸಲಹೆ ನೀಡಿದರು. ಪತ್ರಕರ್ತ, ಪತ್ರಿಕಾ ಛಾಯಾಗ್ರಾಹಕರಿಗೆ ಸವಾಲುಗಳೊಂದಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಆಕಾಶ(ಹೆಲಿಕಾಪ್ಟರ್) ದಿಂದ ಹಂಪಿಯ ಚಿತ್ರ ತೆಗೆದದ್ದು, ಹತ್ತು ವರ್ಷಗಳ ಹಿಂದೆ ಸಿರುಗುಪ್ಪ ತಾಲೂಕಿನಲ್ಲಿ ಪ್ರವಾಹ ಉಂಟಾದಾಗ ಕ್ಲಿಕ್ಕಿಸಿದ ಫೋಟೊಗಳು ತಮಗೆ ಹೆಚ್ಚು ಖುಷಿ ನೀಡಿದವು ಎಂದು ಹೇಳಿದರು.
ವಿದ್ಯಾರ್ಥಿಗಳು ಸಂವಾದ ನಡೆಸಿದರು. ರಕ್ತರಾತ್ರಿಯ ಶಕುನಿ ಪಾತ್ರದ ಸಂಭಾಷಣೆ ಕೇಳಿ ಸಂತಸ ವ್ಯಕ್ತಪಡಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದಿಂದ ಪುರುಷೋತ್ತಮ ಹಂದ್ಯಾಳ್ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಉಪನ್ಯಾಸಕ ಸಿ.ಮಂಜುನಾಥ್ ಸ್ವಾಗತಿಸಿದರು. ಮುರಳೀಧರ ಬಿ.ಕೆ ವಂದಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಬಸವರಾಜ ಬಣಕಾರ, ಹುಲುಗಪ್ಪ. ಗುಜ್ಜಾಲ, ಸುಂಕಣ್ಣ ಟಿ ಮತ್ತಿತರರು ಉಪಸ್ಥಿತರಿದ್ದರು.
*****