ಅವಳು ಸೋಲುವುದು ಪ್ರೀತಿಗಷ್ಟೇ!!
ಶತಮಾನಗಳಿಂದಲೂ ಉಸಿರುಗಟ್ಟಿಸಿದರು,
ಗಂಟಲು ಹಿಸುಕಿದರು, ತುಟಿ ಹೊಲೆದರು,
ಶಕ್ತಿಹೀನಳೆಂದರು, ಶಬ್ಧ ಕಸಿದುಕೊಂಡರು;
ಅವಳು ಧನಿಯೆತ್ತದಂತೆ.
ಪರದೆ ಹೊದಿಸಿದರು, ಬೆಂಕಿಯಿಟ್ಟರು
ನೇಣಿಗೇರಿಸಿದರು, ಚಿತೆಗೆ ನೂಕಿದರು,
ಭ್ರೂಣದಲ್ಲೇ ಕೊಲೆಗೈದರು
ಅವಳ ಸಂತತಿ ಅನಂತ!!
ಕಾಡಿಗಟ್ಟಿದರು, ಜೂಜಿಯಲ್ಲಿ ಪಣಕ್ಕಿಟ್ಟರು,
ಕಲ್ಲಾಗಿಸಿದರು, ವಿಷ ಕುಡಿಸಿದರು,
ಅಬಲೆ, ಅಶಕ್ತೆ ಎನ್ನುತ್ತಾ ಗೆರೆಗಳೆಳೆದು
ಮಿತಿಗಳ ಹೇರಿದರು.
ಅವಳ ಆರ್ತನಾದ ಯಾರಿಗೂ ಕೇಳಿಸಲಿಲ್ಲ
ಅವಳೂ ಕೂಡಾ ಹೇಳಲಿಲ್ಲ!!
ಸಹಿಸಿದಳು, ಕ್ಷಮಿಸಿದಳು ಮತ್ತು ಎಲ್ಲವನ್ನೂ
ಎಲ್ಲರನ್ನೂ ಪ್ರೀತಿಸಿದಳು!!
ಅವಳ ತಲ್ಲಣಗಳೂ ಅವಳಂತೆಯೇ;
ಅಗಾಧ, ಅನಂತ, ಅಸೀಮ…
ಅವಳು ಸೋಲುವುದು,
ಅಪ್ಪಣೆ-ಆದೇಶಗಳಿಗಲ್ಲ, ನಿರ್ಬಂಧಗಳಿಗಲ್ಲ,
ಉಪದೇಶಗಳಿಗಲ್ಲ, ಬಂಧನಗಳಿಗಲ್ಲ.
ಕ್ಷಮಿಸುವ ಅವನಿ ಅವಳು,
ಪಾಪ ತೊಳೆಯುವ ಗಂಗೆಯೂ!!
ಅವಳು ಸೋಲುವುದು ಪ್ರೀತಿಗಷ್ಟೇ!!
~ ವಿನುತಾ, ಬೆಂಗಳೂರು ✍️