ನಗುವೆಂಬ ಮುಲಾಮು
ಜೊತೆಗಿದ್ದಾಗ
ಹೊಟ್ಟೆ ಹುಣ್ಣಾಗುವಷ್ಟು ನಕ್ಕರು
ದೂರ ನಿಂತಾಗ
ಹೊಟ್ಟೆಕಿಚ್ಚಿಗೆ ನಕ್ಕರು
ಕಣ್ಮರೆಯಾದಾಗ
ಹೊಟ್ಟೆಯೊಳಗೊಳಗೆ ನಕ್ಕರು
ನಗಬೇಕು.. ನಗಬೇಕು..
ನೋವು ಮರೆಯುವಂತೆ
ಮನುಷ್ಯತ್ವದ ನವನಾಡು ಹುಟ್ಟುವಂತೆ
ನಗಬೇಕು ನರಮಾನವರೆಲ್ಲ
ನಗುವೊಂದು ದಿವ್ಯ ಔಷಧ
ಸತ್ತವರ ಮುಖದಲ್ಲೂ ಮುಗುಳ್ನಗೆ ಬಿಂಬ
ಹಚ್ಚುತ್ತೇನೆ
ನಗುವೆಂಬ ಮುಲಾಮು
ನೊಂದ ಮನಸ್ಸಿನ
ಹಸಿ ಗಾಯದ ಮೇಲೆ..
ಹಚ್ಚಲಾರೆ
ನಗುವೆಂಬ ಮುಲಾಮು
ಮೇಲು-ಕೀಳೆಂಬ
ಹಳೆಯ ಗಾಯದ ಕೀವಿಗೆ..
ಶತ ಶತಮಾನಗಳಿಂದ
ಮುಲಾಮು ಹಚ್ಚಿದ
ಕೈಬೆರಳುಗಳಲ್ಲಿ ಇನ್ನೂ
ರಕ್ತದ ಕಮಟು ವಾಸನೆ
ಇನ್ನೆಷ್ಟು ಶತಮಾನಗಳು ಬೇಕು..?
ನೊಂದವರ ಮೊಗದಲ್ಲಿ ನಗುವ ಕಾಣಲು!
-ಡಾ.ಬಿ.ಆರ್.ಕೃಷ್ಣಕುಮಾರ್, ಚಾಮರಾಜನಗರ
*****