ಅನುದಿನ ಕವನ-೪೪೦, ಕವಿ: ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ: ಅಚ್ಚರಿ ಕಿನ್ನರಿ….!

ಅಚ್ಚರಿ ಕಿನ್ನರಿ..!

ಅವಳೊಂದು ಅಚ್ಚರಿ
ಅರ್ಥಕು ಅರಿವಿಗು
ನಿಲುಕದ ಸಿಲುಕದ
ವಿಸ್ಮಯಗಳ ಸಾಗರಿ.!

ಒಮ್ಮೆ…….
ಒಲವ ತೊಟ್ಟಿಲಲಿ
ಮಲಗಿಸಿ ಮುದ್ದಿಸಿ
ಹಾಡಿ ತಾಯಂತೆ
ಮೆಲ್ಲನೆ ತೂಗುವಳು.!

ಇನ್ನೊಮ್ಮೆ……
ಎದೆಯ ಮಡಿಲಲಿ
ಹೊಕ್ಕು ಹರಿದಾಡಿ
ಕಾಡಿ ಮಗುವಂತೆ
ಥಟ್ಟನೆ ಅಪ್ಪುವಳು.!

ಒಮ್ಮೆ…….
ಮಹಾ ಪ್ರಬುದ್ದಳಾಗಿ
ಪದಪದ ಭಗವದ್ಗೀತೆ
ನುಡಿ ನುಡಿಯಲ್ಲೂ
ಅರಿವಿನ ಪ್ರಣತೆ.!

ಮತ್ತೊಮ್ಮೆ…….
ಶುದ್ದ ಮುಗ್ಧಳಾಗಿ
ಶಬ್ದಶಬ್ದ ಶಿಶುಗೀತೆ
ಸ್ವರ ಸ್ವರದಲ್ಲೂ
ಮುದ್ದಿನ ಹಣತೆ.!

ಒಮ್ಮೆ……….
ಕಿಲಕಿಲ ಕಲರವ
ಪ್ರೀತಿಯ ನಗೆದೇವತೆ
ಮಿಂಚನು ಹರಡುವ
ಚೈತನ್ಯದ ಚಿಲುಮೆ.!

ಮಗದೊಮ್ಮೆ………
ಚಿಟಪಟ ಸಿಡಿಯುವ
ಧಗಧಗ ಉರಿಯೊರತೆ
ಮಾತುಮಾತಿಗು ಮುನಿವ
ಕೋಪದ ಕುಲುಮೆ.!

-ಎ.ಎನ್.ರಮೇಶ್. ಗುಬ್ಬಿ.
*****