ಅನುದಿನ ಕವನ-೪೪೧, ಕವಿ:ಮಾಲತೇಶ ನಾ ಚಳಗೇರಿ, ಹಿರೇಹಳ್ಳಿ, ಬ್ಯಾಡಗಿ, ಕವನದ ಶೀರ್ಷಿಕೆ: ಬೆಟ್ಟದ ಹೂವಿದು…….

ಬೆಟ್ಟದ ಹೂವಿದು…….

 

ಬೆಟ್ಟದ ಮೇಗಡೆ ಅರಳಿದ ಹೂವಿದು ಕನ್ನಡ ದೇವಿಯ ಪದತಲದಿ
ಬೆಟ್ಟದ ಕನಸನು ನನಸನು ಮಾಡಿದೆ ಯಾರಿಗು ಹೇಳದೆ ಹೂಮನದಿ-1

ನಗುವಿನ ನಾಕವ ಹೊತ್ತಿಹನೀತನು ಮುದದಲಿ ನಡೆದನು ಜನರೊಳಗೆ
ಧಗೆಯನು ಕಾಣದ ಹೃದಯದ ಧೀರನು ನಗುವಲೆ ಗೆದ್ದನೆ ಜಗದೊಳಗೆ-2

ನಟನೆಯ ವರವನು ಪಡೆದವನೀತನು ಪಟಪಟ ಮಾಡಿದ ಮನಸೂರೆ
ಚಟಪಟ ನಡೆಯುತ ಪ್ರೀತಿಯ ತೋರಲು ಹರಸಲು ಬಂದರು ಮನಸಾರೆ -3

ತುಟಿಗಳ ಅಂಚಲಿ ಸಂಚನು ಕಾಣದ ಮೆಚ್ಚಿನ ನಗುವದು ಹರಡಿಹುದು
ಗುಟುರುವ ದನಿಯಲಿ ಗುಟುರದೆ ಅನುದಿನ ನಗುವಿನ ಚಿಲುಮೆಯ ಹೊತ್ತಿಹುದು -4

ಪಾರ್ವತಿತನಯನು ಯೋಚನೆಯೊಳಗಡೆ ಯೋಜಿಸಿ ಕೆಲಸವ ಮಾಡಿದನು
ರಾಜನ ಸುತನಿವ ನಡೆನುಡಿಯೊಳಗಡೆ ಪೂಜಿಸಿ ಜನರನು ನಡೆದವನು-5

ವಿನಯದ ಶಿಖರವ ಹೊತ್ತಿಹ ಬಳಗದಿ ತೋರದೆ ದರ್ಪವ ಬೆಳೆದವನು
ಪುನೀತನಾದನು ವಿನೀತ ಭಾವದಿ ಹೋದರೂ ಮನದಲಿ ಉಳಿದವನು-6

ಶತೃವೆ ಇಲ್ಲದ ಮಿತ್ರರ ಬಳಗವ ಜಗದೆಡೆ ಹೊಂದಿದ ಪನೀತನು
ಕರ್ತೃವೆ ಆದನು ದೇವರ ಮಡಿಲಲಿ ಶುದ್ಧನೆ ಭಾವದ ಪನೀತನು -7

-ಮಾಲತೇಶ ನಾ ಚಳಗೇರಿ
ಸರ್ಕಾರಿ ಪ್ರೌಢಶಾಲೆ ಹಿರೇಹಳ್ಳಿ, ಬ್ಯಾಡಗಿ
*****