ಕರ್ನಾಟಕ ರತ್ನ ಆಗಲು ಹೆಚ್ಚಿಗೆ ವಿದ್ಯೆ ಬೇಕಾಗಿಲ್ಲ, ಹೃದಯವಂತಿಕೆಯಿದ್ದರೆ ಸಾಕು ಎಂದು ಮತ್ತೊಮ್ಮೆ ತೋರಿಸಿಕೊಟ್ಟವರು ಪುನೀತ್ ರಾಜಕುಮಾರ್ ಅವರು.
ಯುದ್ಧದಿಂದ ಜಗತ್ತನ್ನು ಗೆಲ್ಲಬಹುದು, ಜನರ ಹೃದಯ ಗೆಲ್ಲಲು ಸಾಧ್ಯವಿಲ್ಲ. ಜನರ ಹೃದಯ ಗೆಲ್ಲಲು ಮಾನವೀಯ ಸೂಕ್ಷ್ಮ ಮನಸ್ಸು ಇರಬೇಕು. ಅಂತ ಅತಿ ಸ್ಪಂದನೆಯ ಮನಸ್ಸು ಪುನೀತ್ ಅವರಿಗೆ ಇತ್ತು.
ಅಂದು ಶಂಕರನಾಗ್ ಅವರ ಸಾವು ಸಿನಿಮಾ ಪ್ರಿಯರಿಗೆ ದಿಗ್ರ್ಭಮೆ ಉಂಟು ಮಾಡಿತ್ತು. ೩೦ ವರ್ಷ ಕಳೆದರೂ, ಇಂದಿಗೂ ಶಂಕರನಾಗ್ ಅವರ ಫೊಟೊ ಆಟೋಗಳ ಹಿಂದೆ ಇರುತ್ತವೆ. ಅದಕ್ಕಿಂತ ಹೆಚ್ಚು ಕಾಡಿದ್ದು, ಪುನೀತ್ ರಾಜ್‌ಕುಮಾರ್‌ರವರ ಸಾವು, ಇದನ್ನು ಶತಮಾನದ ಸಾವು ಎನ್ನಬಹುದು. ಎಲ್ಲರ ಮನೆಯಲ್ಲಿ ತಮ್ಮ ಮನೆಯ ಸದಸ್ಯನನ್ನು ಕಳೆದುಕೊಂಡಿದ್ದಾರೆ ಎನ್ನುವ ಹಾಗೆ ನೋವು, ಸಂಕಟ ಅನುಭವಿಸಿದ್ದಾರೆ.
“ನಿನ್ನ ಕಂಗಳ ಬಿಸಿಲ ಹನಿಗಳು ನೂರು ಕಥೆಯ ಹೇಳಿವೆ..” ಹಾಡಂತು ಆ ಸಮಯದಲ್ಲಿ ಎಲ್ಲರೂ ಗುನುಗುತ್ತಾ ನಿಟ್ಟುಸಿರು ಬಿಡುತ್ತಾ ಭಾರವಾದ ಮನಸ್ಸಿನಲ್ಲಿ ಕೆಲಸ ಮಾಡಿದ್ದಾರೆ. ಅವರು ಮರಣ ಹೊಂದಿದ ಒಂದು ವಾರ ಕರ್ನಾಟಕ ಚೈತನ್ಯವನ್ನೇ ಕಳೆದುಕೊಂಡಿತ್ತು. ಸಣ್ಣ ಮಕ್ಕಳಿಂದ ದೊಡ್ಡವರತನಕ ಯಾರಿಗೂ ಊಟ ಮಾಡಲು, ಕೆಲಸ ಮಾಡಲು ಆಸಕ್ತಿ ಹೊರಟುಹೋಗಿ ಜೀವನ ಇಷ್ಟೇನಾ ಎಂದು ಜೀವನದ ಬಗ್ಗೆ ಜಿಗುಪ್ಸೆ ಮೂಡಿತ್ತು. ಪುನೀತ್ ಸಾವು ಜಗತ್ತಿನಾದ್ಯಂತ ಸುದ್ದಿಯಾಯಿತು. ಬಿ.ಬಿ.ಸಿ ನ್ಯೂಸ್‌ನಲ್ಲಿ ಬಂದರೆ, ಅಂತರಾಷ್ಟ್ರೀಯ ವಿದೇಶಿ ಕ್ರಿಕೇಟಿಗರು, ಬಾಲಿವುಡ್, ಟಾಲಿವುಡ್, ತಮಿಳು, ಮಲೆಯಾಳಿ, ಮರಾಠಿ ಚಿತ್ರರಂಗದವರು ಸಂತಾಪ ಸೂಚಿಸಿದರು, ಹಾಗೆಯೇ ಪಕ್ಕದ ರಾಜ್ಯದ ಜನರು, ನಮ್ಮ ರಾಜ್ಯದ ಜೊತೆಗೆ ಭಿನ್ನಾಭಿಪ್ರಾಯವಿದ್ದರೂ ಅದನ್ನು ಮರೆತು ಕಂಬನಿ ಮಿಡಿದರು.
ಪುನೀತ್ ಬ್ಯಾನರ್, ಫೋಟೊ ಹಾಕಿ ಶ್ರದ್ಧಾಂಜಲಿ ಸಲ್ಲಿಸದ ಊರು, ನಗರಗಳು ಕರ್ನಾಟಕದಲ್ಲಿ ಇಲ್ಲ. ಅವರ ಅಂತಿಮ ದರ್ಶನ ಪಡೆದ ಜನರ ಸಂಖ್ಯೆ ೨೫ ಲಕ್ಷಕ್ಕಿಂತಲೂ ಹೆಚ್ಚು. ಅದನ್ನು ಮಹಾತ್ಮ ಗಾಂಧಿಗೆ ಹೋಲಿಕೆ ಮಾಡಲಾಗುತ್ತದೆ. ಆ ಮಹಾತ್ಮನ ಅಂತಿಮ ದರ್ಶನ ಪಡೆದವರಿಗಿಂತ ಈ ಪರಮಾತ್ಮನ ಅಂತಿಮ ದರ್ಶನ ಪಡೆದವರೇ ಹೆಚ್ಚು. ಅಂತಿಮ ಸಂಸ್ಕಾರ ಮುಗಿದನಂತರ ಸಮಾಧಿಯ ಗದ್ದುಗೆ ನೋಡಲು ಲಕ್ಷಾಂತರ ಜನರ ಸಾಲು ಕರ್ನಾಟಕದ ಮೂಲೆಮೂಲೆಗಳಿಂದ ಪಾದಯಾತ್ರೆ, ಸೈಕಲ್ ಜಾಥಾ, ಬೈಕ್‌ನಿಂದ ಸಮಾಧಿಗೆ ಹೋಗಿ ನಮಸ್ಕರಿಸಿ ಬಂದಿದ್ದಾರೆ. ಒಂದೇ ವಾರದಲ್ಲಿ ಅಪ್ಪುವಿನ ಪುಸ್ತಕ ಬಿಡುಗಡೆಯಾಗಿದೆ. ದೇವರ ಫೋಟೊಗಳ ಜೊತೆಗೆ ಅಪ್ಪು ಫೋಟೊ ಇಟ್ಟು ಮಾರಾಟವಾಗಿವೆ. ನೂರಾರು ಸರ್ಕಲ್‌ಗಳಲ್ಲಿ ಅಪ್ಪು ಅವರ ಮೂರ್ತಿಗಳ ಸ್ಥಾಪನೆ ಮಾಡಲಾಗಿದೆ. ಇನ್ನೂ ಹಲವಾರು ಮೂರ್ತಿ ಸ್ಥಾಪನೆಗೆ ಮೂರ್ತಿಗಳನ್ನು ಆರ್ಡರ್ ಕೊಟ್ಟಿದ್ದಾರೆ. ಹೊಸಪೇಟೆಯ ಶಾನಭಾಗ್ ವೃತ್ತ ಪುನೀತ್ ವೃತ್ತವಾಗಿದೆ. ಎಷ್ಟೋ ಮನೆಗಳಲ್ಲಿ ದೇವರ ಕೋಣೆಯಲ್ಲಿ ಪುನೀತ್ ಫೋಟೊ ಇಟ್ಟು ಪೂಜೆ ಮಾಡುತ್ತಿದ್ದಾರೆ. ಎಂದೂ ಕೇಳರಿಯದ ಈ ಹುಚ್ಚು ಅಭಿಮಾನ ಏಕೆ? ಯಾರಿಗೂ ಸಿಗದ ಗೌರವ, ಅಭಿಮಾನ ಪುನೀತ್‌ಗೆ ಏಕೆ ಸಿಕ್ಕಿತು, ಇದನ್ನು ನಾನು ಅಷ್ಟೇ ಅಲ್ಲ, ಪಕ್ಕದ ರಾಜ್ಯದವರು, ದೆಹಲಿ, ಪಂಜಾಬ್, ಉತ್ತರಪ್ರದೇಶದವರು ತಲೆಕೆಡಿಸಿಕೊಂಡು ಗೂಗಲ್‌ನಲ್ಲಿ ಪುನೀತ್ ರಾಜಕುಮಾರ್‌ನನ್ನು ಹುಡುಕಿ ಲಕ್ಷಾಂತರ ಜನ ನೋಡಿದ್ದಾರೆ. ಈ ಪರಿಯ ಅಭಿಮಾನಕ್ಕೆ ಕಾರಣ ಏನು? ಅಪ್ಪು ಮಾಡಿ ಹೋದ ಕಾರ್ಯಗಳು, ದಾನ ಧರ್ಮಗಳು, ಎಲ್ಲರನ್ನೂ ಅಪ್ಪಿಕೊಂಡ ಬಗೆ, ಸಾಧಾರಣ ಯುವಕ ಬರಿ ೧೦ ವರ್ಷಗಳಲ್ಲಿ ಅಸಾಮಾನ್ಯ ಮನುಷ್ಯ ಆಗಿದ್ದು ಹೇಗೆ ಎಂದು ನೋಡುತ್ತಾ ಹೋದರೆ, ನನಗೆ ಅನಿಸುವುದು ಸಣ್ಣವರಿದ್ದಾಗ ಹೆತ್ತವರ ಸಂಸ್ಕಾರ, ಅರಿವು ಬಂದ ಮೇಲೆ ಡಾ. ಶಿವಕುಮಾರ ಸ್ವಾಮಿಗಳ ನಿಸ್ವಾರ್ಥ ಸೇವೆಯ ಗುಣ. ಇವು ಎರಡು ಅವರ ಮೇಲೆ ಗಾಢ ಪರಿಣಾಮ ಬೀರಿವೆ. ತಾವು ದಾನ, ಧರ್ಮ, ನಿಸ್ವಾರ್ಥ ಸೇವೆಗೆ ಡಾ. ಶಿವಕುಮಾರ ಸ್ವಾಮಿಗಳೇ ಪ್ರೇರಣೆ ಎಂದು ಹೇಳಿಕೊಂಡಿದ್ದಾರೆ.
ಕನಾಟಕ ರತ್ನ ಡಾ. ರಾಜಕುಮಾರ ಅವರ ಸರಳ ಗುಣಗಳು, ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮಿಗಳ ನಿಸ್ವಾರ್ಥ ಸೇವೆಗಳು ಇವರನ್ನು ಕರ್ನಾಟಕ ರತ್ನ, ಡಾ. ಪುನೀತ್ ರಾಜಕುಮಾರನನ್ನಾಗಿ ಮಾಡಿವೆ. ಅಪ್ಪನಂತೆ ದೊಡ್ಡ ಸ್ಟಾರ್ ಆದರೂ ಹೇಗೆ ಸರಳವಾಗಿ ಜನರ ಜೊತೆ ಬೆರೆಯಬೇಕು, ಹೇಗೆ ಸರಳವಾಗಿ ಬದುಕಬೇಕು ಎಂದು ಕಲಿತರೇ, ಡಾ. ಶಿವಕುಮಾರ ಸ್ವಾಮಿಗಳಿಂದ ಜಾತಿ, ಧರ್ಮ ನೋಡದೇ ಸಹಾಯ ಕೇಳಿಬಂದಾಗ ಕಣ್ಣೀರು ಒರೆಸುವ ಗುಣವನ್ನು ಪಡೆದುಕೊಂಡರು.
ದಾನ ಮಾಡಲು, ಕೊಲೆ ಮಾಡಲು ಎದೆಗಟ್ಟಿ ಇರಬೇಕು ಎನ್ನುತ್ತಾರೆ. ಯಾಕೆಂದರೆ ದಾನ ಮಡಲು ಎಲ್ಲರಿಂದ ಸಾಧ್ಯವಿಲ್ಲ. ಅದು ಯಾರಿಗೂ ಗೊತ್ತಾಗದ ಹಾಗೆ ದಾನ ಮಾಡಲು ಅತ್ಯಂತ ಶ್ರೇಷ್ಟ ಮನಸು ಬೇಕು. ಅಂತಹ ಮನಸ್ಸನ್ನು ಡಾ. ಪುನೀತ್ ರಾಜಕುಮಾರ ಅವರು ಹೊಂದಿದ್ದರು. ಕಾಲಚಕ್ರದಲ್ಲಿ ನಕ್ಷತ್ರಗಳು ಬಂದು ಮರೆಯಾಗುತ್ತವೆ. ಅವುಗಳಿಗೆ ಆಯುಷ್ಯ ಇರಲ್ಲ. ಆದರೆ ಅದ್ಭುತ ತೇಜಸ್ಸನ್ನು ದೇವರು ಅವುಗಳಿಗೆ ಕರುಣಿಸುತ್ತಾನೆ. ಅಂತಹ ನಕ್ಷತ್ರಗಳು ನೂರು ವರ್ಷ ಇದ್ದರೂ ಮಾಡದ ಸಾಧನೆಯನ್ನು ೪೦, ೪೫ ರ ವರ್ಷಗಳಲ್ಲಿ ಮಾಡಿ ಹೋಗುತ್ತಾರೆ. ಅಂತಹ ಸಾಲಿಗೆ ಸೇರಿದವರು ಪುನೀತ್.
ಅವರ ಇಷ್ಟೊಂದು ಅಭಿಮಾನಕ್ಕೆ ಅವರ ವಿಶೇಷ ಗುಣಗಳೇ ಕಾರಣ.
೧) ಅವರು ಎಂದೂ ಸ್ಟಾರ್ ಪಟ್ಟದ ಹಿಂದೆ ಬೀಳಲಿಲ್ಲ. ಅದು ಬಂದರೂ ತಲೆಗೆ ಏರಿಸಿಕೊಳ್ಳಲಿಲ್ಲ. ಅರಮನೆಯಾಗಲೀ, ಕುರಿಹಟ್ಟಿಯಾಗಲೀ ಅನ್ನಕ್ಕೆ ಬೇಧ ಮಾಡಬಾರದು ಎಂದು ತೋರಿಸಿಕೊಟ್ಟರು.
೨) ಎಂದೂ ಮಚ್ಚು ಹಿಡಿದು ಸಿನಿಮಾ ಮಾಡಿ, ಯುವಕರ ದಾರಿ ತಪ್ಪಿಸಲಿಲ್ಲ. ಯುವಕರಿಗೆ ಪ್ರೇರಣೆ ಆಗುವಂತಹ ಸಿನಿಮಾ ತೆಗೆದರು.
೩) ಸಿನಿಮಾ ನಟರು ಹಿರಿಯರಿಗೆ ಇಷ್ಟ ಆಗುವುದಿಲ್ಲ. ಇವರು ಮನೆಯವರೆಲ್ಲರೂ ಕುಳಿತು ನೋಡುವಂತಹ ಸಿನಿಮಾ ತೆಗೆದರು. ಅಶ್ಲೀಲ ಚಿತ್ರಗಳಲ್ಲಿ ಅಭಿನಯಿಸಲಿಲ್ಲ. ಹಾಗಾಗಿ ಇವರ ಸಾವಿಗೆ ಹಿರಿಯ ಹೃದಯಗಳು ಮಿಡಿದವು.
೪) ಹಾಲನ್ನು ನನ್ನ ಭಾವಚಿತ್ರದ ಕಟ್ಟೌಟ್‌ಗಳಿಗೆ ಹಾಕಬೇಡಿ, ವೇಸ್ಟ್ ಆಗುತ್ತವೆ ಎಂದು ಹೇಳಿ, ನಿಜವಾದ ಅಭಿಮಾನಿ ಹೇಗಿರಬೇಕು ಎಂದು ಯುವಕರಿಗೆ ಪಾಠ ಕಲಿಸಿ ನಿಜವಾದ ಹಿರೋ ಆದವರು ಪುನೀತ್.
೫) ಯಾರೆ ಫೋಟೊ ತೆಗೆಸಿಕೊಳ್ಳಲು ಬಂದರೆ ನಗುನಗುತ್ತಾ ಮಾತನಾಡಿಸಿ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಚಿಕ್ಕಮಕ್ಕಳಿಗೆ ಪ್ರೀತಿಯ ಮಾಮ ಆಗಿದ್ದರು.
೬) ನಿರ್ದೇಶಕರು, ನಿರ್ಮಾಪಕರಿಗೆ, ಹಿರಿಯ ನಟರಿಗೆ ಹೀಗೆ ವಿನಯತೆಯಿಂದ ಇರಬೇಕು ಎಂದು ಹೇಳಿಕೊಟ್ಟವರು.
೭) ದೇಶ, ಭಾಷೆ, ಧರ್ಮ ಯಾವುದೇ ವಿವಾದಗಳ ಗೋಜಿಗೆ ಹೋಗದಂತೆ ಎಚ್ಚರಿಕೆಯಾಗಿ ಹೆಜ್ಜೆ ಇಟ್ಟರು.
೮) ಚಿತ್ರರಂಗದ ಇತರೆ ನಾಯಕ ನಟರ ಜೊತೆಗೆ ಸ್ಪರ್ಧೆಗೆ ಇಳಿಯಲಿಲ್ಲ. ಅದರ ಬದಲು ಅವರನ್ನು ಹೊಗಳಿ ಮಾತನಾಡಿದರು.
೯) ಬಹುಮುಖ್ಯವಾಗಿ ರಾಜಕೀಯದಿಂದ ಬಹುದೂರ ಉಳಿದರು. ಸ್ವತಃ ಅವರ ಅತ್ತಿಗೆ ಚುನಾವಣೆಯಲ್ಲಿ ನಿಂತರೂ ತಂದೆಯ ಹಾಗೆ ನಾನು ಯಾವ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ ಎಂದು ದೃಢ ನಿರ್ಧಾರ ಮಾಡಿದರು.
೧೦) ಯಾವ ಪ್ರಶಸ್ತಿ, ಸನ್ಮಾನ, ಪ್ರಚಾರಕ್ಕೆ ಹೆಚ್ಚಿಗೆ ಒತ್ತು ಕೊಡಲಿಲ್ಲ.
೧೧) ಸಮಾಜಮುಖಿ ಕೆಲಸಗಳಿಗೆ, ಉಪಯುಕ್ತ ಜಾಹೀರಾತುಗಳಿಗೆ ಅವರು ಹಣವನ್ನು ಪಡೆಯುತ್ತಿದ್ದಿಲ್ಲ. ಅಂದರೆ ಹಣದ ಹಿಂದೆ ಅವರು ಬೀಳಲಿಲ್ಲ.
ಹೀಗೆ ಪುನೀತ್ ರಾಜಕುಮಾರ ಅವರು ನಮಗೆ ಹಲವಾರು ಪಾಠಗಳನ್ನು ಕಲಿಸಿ ಹೋಗಿದ್ದಾರೆ. ಅವರ ಬದುಕಿನಿಂದ ಎಲ್ಲರೂ ಬಹಳಷ್ಟು ಕಲಿಯಬೇಕಾಗಿದೆ. ಹಾಗೆ ಅದರಲ್ಲಿ ಅವರ ಸಾವಿನಿಂದಲೂ ಹಲವು ಪಾಠ ಕಲಿಯಬೇಕಾಗಿದ್ದೂ ಇದೆ.
೧) ಜೀವನ ಶಾಶ್ವತ ಅಲ್ಲ, ಇದ್ದಷ್ಟು ದಿನ ಖುಷಿಖುಷಿಯಿಂದ ಇರಬೇಕು. ಯಾರ ಜೊತೆಗೂ ದ್ವೇಷ, ಅಸೂಯೆ ಮನಸ್ತಾಪ ಇಟ್ಟುಕೊಳ್ಳಬಾರದು.
೨) ಎಷ್ಟೇ ಆಸ್ತಿ, ಅಂತಸ್ತು ಗಳಿಸಿದ್ದರೂ ಈ ಜೀವನ ಕ್ಷಣಿಕ, ದೇವರ ಕರೆ ಬಂದರೆ ಬಿಟ್ಟು ಹೋಗಲೇ ಬೇಕು. ನಾವು ಮಾಡಿದ ಆಸ್ತಿಗಿಂತ ನಾವು ಸಮಾಜಕ್ಕೆ ಮಾಡಿದ ಕೆಲಸಗಳು ಶಾಶ್ವತ ಉಳಿಯುತ್ತವೆ.
೩) ಅತಿ ಆಸೆ ಮಾಡಬಾರದು, ದುಡಿದ ದುಡ್ಡಿನಲ್ಲಿ ಅಂಗವಿಕಲರಿಗೆ, ನಿರ್ಗತಿಕರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕು. ಈ ರೀತಿಯಲ್ಲಿ ಸಹಾಯ ಹಾಗೂ ದಾನ ಮಾಡಿದ್ದನ್ನು ಎಲ್ಲೂ ಹೇಳಿಕೊಳ್ಳಬಾರದು.
೪) ಮಾತೃ ಭಾಷೆ, ಸಂಸ್ಕೃತಿಗೆ ಬೆಲೆ ಕೊಡಬೇಕು. ಆದಷ್ಟು ಸರಳ ಜೀವನ ನಡೆಸಬೇಕು.
೫) ಎಲ್ಲರಿಗೂ ಗೌರವ ನೀಡಿ, ವಿನಯಪೂರ್ವಕವಾಗಿ ಮಾತನಾಡಿಸಬೇಕು.
೬) ಅಹಂಕಾರ, ದರ್ಪ ಇರಬಾರದು.
೭) ಬರಿ ವ್ಯವಸ್ಥೆಯನ್ನು ದೂಷಿಸುವ ಬದಲು ನಾವೇ ಸ್ವತಃ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕು.
ಅವರು ಒಬ್ಬ ಪೂರ್ಣ ಪ್ರಮಾಣದ ನಾಯಕ (ಕಂಪ್ಲೀಟ್ ಹೀರೊ) ಆಗಿದ್ದರು. ನಟನೆ, ಗಾಯನ, ಡ್ಯಾನ್ಸ್, ಫೈಟಿಂಗ್ ಎಲ್ಲದರಲ್ಲಿಯೂ ಅವರು ಎತ್ತಿದ ಕೈ. ಅಂತಹ ಕಂಪ್ಲೀಟ್ ಪ್ಯಾಕೇಜ್ ನಟ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಸಿಗುವುದು ಕಷ್ಟ. ಅವರ ಸಾವು ಬರಿ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಇಡೀ ಭಾರತ ಚಲನಚಿತ್ರರಂಗಕ್ಕೆ, ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ದಾನ, ಧರ್ಮ, ದಾಸೋಹಕ್ಕೆ ಮತ್ತೊಂದು ಹೆಸರು ಕರ್ನಾಟಕ. ಅದು ಶರಣ ಸಂತ ದಾರ್ಶನಿಕರು ಕರ್ನಾಟಕಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ. ಅದನ್ನು ಶತಮಾನಗಳಿಂದ ನಡೆಸಿಕೊಂಡ ಬಂದ ಸಿದ್ಧಗಂಗಾ ಮಠ, ಇತರೆ ಕರ್ನಾಟಕದ ಮಠಗಳು. ಅಪ್ಪು ಆ ದಾಸೋಹ ತತ್ವವನ್ನು ಯುವಕರ ಮನಸ್ಸಿನಲ್ಲಿ ಜಾಗೃತಗೊಳಿಸಿದವರು. ಅಪ್ಪು ಅವರ ಮರಣದ ನಂತರ ನೇತ್ರದಾನ, ರಕ್ತದಾನ, ನಿರಂತರ ದಾಸೋಹಗಳು ಕರ್ನಾಟಕದ ಮೂಲೆಮೂಲೆಗಳಲ್ಲಿ ನಡೆಯುತ್ತಿವೆ. ಅವುಗಳನ್ನು ಯುವಕರೇ ಆಯೋಜಿಸುತ್ತಿರುವುದು ಪುನೀತ್ ಅವರು ಯುವಕರ ಮನಸಿನ ಮೇಲೆ ಮೂಡಿಸಿದ ಮಾನವೀಯತೆಯ ಪ್ರತಿಫಲ. ಪರದೆ ಮೇಲೆ ಹೀರೋ ಆದವರು ನಿಜ ಜೀವನದಲ್ಲಿ ಹೀರೊ ಆಗುವುದು ಅಷ್ಟು ಸುಲಭದ ಮಾತಲ್ಲ. ಅದು ತಪಸ್ಸು. ಅಂತಹ ತಪಸ್ಸನ್ನು ಮಾಡಿ, ಸಾಧಿಸಿ ತೋರಿಸಿದ ಆ ಬೆಟ್ಟದ ಹೂವಿಗೆ ಕರ್ನಾಟಕದ ಜನರ ಕಂಬನಿಯ ಮಿಡಿತ ಎಷ್ಟು ವರ್ಷಗಳಾದರೂ ಹೀಗೆ ಇರುತ್ತದೆ. ಅವರ ನೆನಪುಗಳು ದಾನ, ಧರ್ಮ, ದಾಸೋಹ ಸೇವೆಯಲಿ ಶತಶತಮಾನಗಳವರೆಗೂ ಉಳಿಯುತ್ತವೆ.
-ಡಾ. ಶಿವಕುಮಾರ ಮಾಲಿಪಾಟೀಲ್
ಗಂಗಾವತಿ-೫೮೩೨೨೭, ಕೊಪ್ಪಳ ಜಿಲ್ಲೆ.
ಮೊ.ನಂ: ೯೪೪೮೩೦೨೭೭೫
*****