ಅನುದಿನ ಕವನ-೪೪೩, ಕವಿ: ಡಾ. ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ಬಾಹುಬಲಿ

ಬಾಹುಬಲಿ

ಕಾರ್ಕಳದ
ಅಜಾನುಭಾವ
ಬಿಸಿಯುಸಿರ ತಾಪದಲ್ಲೂ
ತಣ್ಣನೆಯ ತಂಬೆಲರ ಹನಿ ತೀಡಿದಂತೆ
ದೂರದಲ್ಲಿದ್ದರೂ ಕಾಣುವ ಮುಖಭಾವ

ನೋಡುಗನ ನೋಟಸೆಳೆವ
ಕರಿಕಲ್ಲ ಗುಡ್ಡದ ಮೇಲೆ
ಏಕಾಕಾರದಂತೆ ನಿಂತ
ನಿರಾಯುಧ,ನಿರ್ವಿಕಾರ,ನಿರಲಂಕಾರ
ಕರುಳ ಬಂಧು

ನಾನು ಬಲ್ಲೆ ನಿನ್ನ ಘನವ
ಅಣ್ಣ ಭರತನ ಭೋಗದ ಕುಲುಮೆಗೆ
ಜಲದ ಗಂಧ ತೀಡಿದ ತ್ಯಾಗಮಯಿ ನೀ
ನಿನ್ನ ಬಾಹುವಿಗೆ ಅದೆಂತಹ ಕರುಣೆಯ ಮೈತ್ರಿ
ಭರತನ ಯುದ್ಧದಾಹವ ಅಡಗಿಸಲು ಆಕಾಶಕ್ಕೆತ್ತಿ
ಅವನ ಧರೆಗಪ್ಪಳಿಸಬೇಕಿತ್ತಲ್ಲವೇ…

ಯಾವ ಸಮತೆಯ ಬೆಳಕು ಹರಿಯಿತೋ
ನಿನ್ನ ಮೈಯಿಗೆ
ರಕ್ತಸಂಬಂಧಿ ಅಣ್ಣನಲ್ಲವೇ ಇಂವ
ಎಂಬ ತನುವಿನರಿವಿಗೆ
ಹಾಗೇ ಇಳಿಸಿದೆ ಹೃದಯಕಮಲಕ್ಕೆ
ಜ್ಞಾನೋದಯವಾಯಿತಲ್ಲವೇ ಮನಕ್ಕೆ

ಅವನಿಗೋ ಬಿಡದ ಅಹಂಕಾರ
ನೀನು ಕಲ್ಲಾದೆ
ಮೃದು ಮಧುರ ಬಂಧದಲ್ಲಿ
ನಮ್ಮ ಮನಕ್ಕೆ ಸೇತುವೆಯಾದೆ

ಅವನೋ ಭರತಚಕ್ರಿಯಾದರೂ
ಕಲ್ಲಾಗುವುದಿರಲಿ
ಯಾರ ಮನದಲ್ಲೂ ಜೀವನದಿಯಾಗಿ
ಕೂಡಲಿಲ್ಲ.

ನಮ್ಮ ಬಾಹುಬಲಿ ನಮ್ಮಂತೆಯೇ ರೂಪವುಳ್ಳವ
ಅವನು ಹೊರಗೆ ಬೆತ್ತಲೆ
ನಾವು ಒಳಗೆ ಬೆತ್ತಲೆ
ಅವನಿಗೆ ಸದಾ ಅರಿವಿನ ದೀಪ
ನಮಗೆ ಒಳಗೂ ಕತ್ತಲೆ ಹೊರಗೂ ಕತ್ತಲೆ!

ಬುದ್ಧ ಹೇಳಿದಂತೆ
ಈಗ ನಮ್ಮ ದೀಪವನು ನಾವೇ ಹುಡುಕಿಕೊಂಡು
ದಾರಿಸಾಗಬೇಕು
ಬೆಳಕಿನ ಹಾಡ ಹೇಳಬೇಕು.

-ಡಾ.ನಿಂಗಪ್ಪ ಮುದೇನೂರು, ಧಾರವಾಡ