ಅನುದಿನ ಕವನ-೪೪೪, ಕವಯತ್ರಿ: ಬಿ.ಸಿ. ಶೈಲಾ ನಾಗರಾಜ್ , ತುಮಕೂರು, ಕವನದ ಶೀರ್ಷಿಕೆ: ಗುಬ್ಬಿ

ಗುಬ್ಬಿ

ಆಗ
ಅಂಗಳದ ಅಕ್ಕಿ ನುಚ್ಚಿಗೆ
ತೊಗರಿ ಕಾಳಿಗೆ,ಜೋಳ,ಕುಸುಬೆಗೆ
ಮುಗಿಬಿದ್ದ ಮೆದುವಾನಿ

ಮುದ್ದು ಮೂತಿಯ ಚಿಲಿಪಿಲಿ ಹಾಡಿನ
ಅಜ್ಜಿ ಬೆರಳ ಕುಸುರಿಗೆ
ಮುದ್ದಾದ ದಮಯಂತಿ

ತೆಳ್ಳನ ನಡು
ಬಳುಕುವ ಕತ್ತು ಕೊಂಕಿಸಿ
ಬಳಗವೆಲ್ಲಾ ಮುತ್ತಿ
ನುಚ್ಚು ಗುಟುಕಿಸುವ ಸೊಬಗು

ಹಿಡಿಗೆ ಬಾರದ ದೇಹ
ಮಕ್ಕಳ ತುಂಟಾಟಕ್ಕೆ ಬೆದರಿ
ಅಜ್ಜಿ ಮಡಿಲ ಸೇರಿ
ಗಾಬರಿಗೊಂಡು
ನಡುಮನೆ ಹಾದು
ಅಡುಗೆ ಮನೆ ತೂತಿನಲಿ
ಪರ್ರನೆ ಹಾರಿ
ಮಾಡಿನ ಮೌನಕ್ಕೆ ಮಾರ್ದನಿ ನೀಡಿ
ಅಲ್ಲೇ ಅದರ ಸಂಸಾರ
ಕಂಗಳಲಿ ಉಕ್ಕಿದ ಪ್ರೀತಿ
ಗುಬ್ಬಿ,ಗುಬ್ಬಿ ಮನೆ ಎಲ್ಲವೂ ಮುದ್ದು
ಆಪ್ಯಾಯಮಾನ,ವಿಸ್ಮಯಗಳ ತವರು
ತುಂಟು ಮನದ ಗಾನ.

ಕೇಳದಾಗಿದೆ ಮುದ್ದಕ್ಕಗಳ
ಗುಬ್ಬಿ ಕಲರವ
ಬರಿದೋ ಬರಿದು ಮನೆಯ ಅಂಗಳ
ಚಿತ್ರಪಟ ಟಿ.ವಿ ಪರದೆಗಳ
ಮೇಲಷ್ಟೆ ಇವುಗಳ ಲೀಲೆ
ತೊಗಲು ತೂಗುವ ತಕ್ಕಡಿಯ
ಜಾಗತಿಕ ವ್ಯಾಪಾರ

ಕರಗುತ್ತಿರುವ ಗುಬ್ಬಿ ಕನಸುಗಳು
ಹೃದಯಗಳಲ್ಲಿ ಮರೆಯಾಗುತ್ತಿದೆ
ಬಯಲು ಸೀಮೆಯ ಒಲವು
ಗುಬ್ಬಿ ಪ್ರೀತಿ.

-ಬಿ.ಸಿ.ಶೈಲಾನಾಗರಾಜ್, ತುಮಕೂರು


*****

Sparrow Pc:ಸಿದ್ಧರಾಮ ಕೂಡ್ಲಿಗಿ