ಅನುದಿನ ಕವನ-೪೪೫, ಕವಿ: ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ:ಲವ್ಯೂ ಕವಿತಾ..!

“ಕವಿತೆಯೊಂದಿಗೆ ‘ವಿಶ್ವ ಕವಿತಾ ದಿನ’ ದ ಹಾರ್ದಿಕ ಶುಭಕಾಮನೆಗಳು.. ಒಪ್ಪಿಸಿಕೊಳ್ಳಿ..”

ಇದು ಪೀಠಿಕೆಯಲ್ಲ ಎದೆಯ ಧನ್ಯಭಾವಗಳ ಅಕ್ಷರಮಾಲಿಕೆ. ನಿತ್ಯ ನನ್ನನ್ನೂ, ನನ್ನ ಕವಿತೆಗಳನ್ನೂ ಮೆಚ್ಚಿ, ಹಾರೈಸಿ ಆಶೀರ್ವದಿಸುತ್ತಿರುವ ನಿಮ್ಮ ಸಹೃದಯತೆಗೆ ಹಾಗೂ ನನ್ನೊಡಲನ್ನು ಬೆಳಗುತ್ತ ನನ್ನನ್ನು ನಡೆಸುತ್ತಿರುವ ಕವಿತೆಗಳಿಗೆ ಹೃನ್ಮನಗಳ ಅನಂತ ನಮನಗಳೊಂದಿಗೆ ಸಾವಿರದ ಶರಣು.”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. 👇

ಲವ್ಯೂ ಕವಿತಾ..!

ಐ ಲವ್ ಯೂ ಕಣೇ ಕವಿತಾ..
ಎದೆಯ ಭಾವಗಳ ಅಕ್ಷರವಾಗಿಸಿದ್ದಕ್ಕೆ
ಮನದ ಮಾತುಗಳ ಪದವಾಗಿಸಿದ್ದಕ್ಕೆ.!

ಯಾವುದೋ ಹುಡುಗ ಹುಡುಗಿಯರ
ಒಲವ ಉಸಿರಿಗೆ ಅಭಿವ್ಯಕ್ತಿಯಾಗಿದ್ದಕ್ಕೆ
ಯಾವುದೋ ಹೃದಯ ರಿಂಗಣಗಳಿಗೆ
ಜೊತೆಯಾಗಿ ಹಿತವಾಗಿ ದನಿಯಾಗಿದ್ದಕ್ಕೆ.!

ಯಾರದೋ ಒಡಲ ನೋವು ತಲ್ಲಣ
ಸಂತೈಸಿ ತಿಳಿಯಾಗಿಸಿ ತಂಪಾಗಿಸಿದ್ದಕ್ಕೆ
ಯಾರದೋ ನರಳಿಕೆ ಕಣ್ಣೀರಧಾರೆಗಳ
ಒರೆಸಿ ಮರೆಸಿ ಭಾವ ನಿರಾಳವಾಗಿಸಿದ್ದಕ್ಕೆ.!

ಯಾರದೋ ಜೀವಕ್ಕೆ ರೆಕ್ಕೆಗರಿಯಾಗಿ
ನವ ಚೈತನ್ಯ ತುಂಬಿ ಹಕ್ಕಿಯಾಗಿಸಿದ್ದಕ್ಕೆ
ಯಾರದೋ ಹೆಜ್ಜೆಗೆ ಬೆಳ್ಳಿಗೆಜ್ಜೆಯಾಗಿ
ಬಾನಿನೆತ್ತರಕ್ಕೆ ಬೆಳೆಸಿ ಚುಕ್ಕಿಯಾಗಿಸಿದ್ದಕ್ಕೆ.!

ಪ್ರೀತಿ ಪ್ರೇಮ ತ್ಯಾಗಗಳ ಪ್ರಣತಿಯಾಗಿ
ಅಂಧಕಾರ ತೊಳೆವ ಜ್ಯೋತಿಯಾಗಿದ್ದಕ್ಕೆ
ಶಾಂತಿ ನೀತಿ ತತ್ವಗಳ ನಿಯತಿಯಾಗಿ
ಬದುಕು ಬದಲಿಸುವ ದೀಪ್ತಿಯಾಗಿದ್ದಕ್ಕೆ.!

ಐ ಲವ್ ಯೂ ಕಣೇ ಕವಿತಾ..
ಜನಕೆ ಅನಾಮಿಕನಾಗಿದ್ದ ನನಗೊಂದು
ಹೆಸರು ಗುರುತುಸುವಿಕೆಗಳ ನೀಡಿದ್ದಕ್ಕೆ
ಜಗಕ್ಕೆ ಅಗೋಚರನಾಗಿದ್ದ ನನಗೊಂದು
ವಿಳಾಸ ವಿನ್ಯಾಸಗಳ ಕೊಡಮಾಡಿದ್ದಕ್ಕೆ.!

ಐ ಲವ್ ಯೂ ಕಣೇ ಕವಿತಾ..
ನೀನೆಂದರೆ ಹೃದ್ಯಸ್ವರಗಳ ರಾಗಮಾಲಿಕೆ
ಸಾವಿರದ ಕನಸು ಕಲ್ಪನೆಗಳ ಕಾವ್ಯಕನ್ನಿಕೆ.!

ಎ.ಎನ್.ರಮೇಶ್. ಗುಬ್ಬಿ.


*******