ಅನುದಿನ ಕವನ-೪೪೬, ಕವಿ: ಅಶ್ವತ್ಥನಾರಾಯಣ, ಮೈಸೂರು, ಕವನದ ಶೀರ್ಷಿಕೆ: ನೀರು ಉಳಿಸಿ

ವಿಶ್ವ ಜಲದಿನದ ಪ್ರಯುಕ್ತ ಕವನ….👇

ನೀರು ಉಳಿಸಿ

ಕೆರೆಯ ಕಟ್ಟಿಸು ಬಾವಿ ತೋಡಿಸು
ಎನ್ನುತಿದ್ದರು ಪೂರ್ವದಿ|
ಜಲದ ಮೌಲ್ಯವ ತಿಳಿದುಕೊಂಡಿಹ
ಜನರಿಹರೆ ಈಕಾಲದಿ||

ಒಂದು ಹನಿಹನಿ ನೀರು ಸಿಗುವುದು
ಕಷ್ಟವಿರುವುದು ಇಂದಿಗೆ|
ಪೋಲು ಮಾಡದೆ ಮಿತದ ಬಳಕೆಯು
ಇರಲುಬೇಕಿದೆ ಒಳಿತಿಗೆ||

ಹೊಸತು ಸೃಷ್ಟಿಯ ಮಾಡಲಾರನು
ನೀರನೆಂದಿಗು ಮನುಜನು|
ಇರುವ ನೀರನು ಬಳಕೆ ಮಾಡುತ
ಕಾಯಬೇಕಿದೆ ಹಿತವನು||

ಜಲವನುಳಿಸುತ ಜೀವ ಪೊರೆಯುವ
ಕಾರ್ಯ ಮಾಡಲು ಒಳಿತಿದೆ|
ನಿರುತ ಎಚ್ಚರ ಗುಣವ ತೋರುತ
ನೀರು ಉಳಿಸಲು ಸುಖವಿದೆ||

ಭೂಮಿ ಮೇಲ್ಗಡೆ ಕಡಲು ಇದ್ದರು
ಕುಡಿಯಲಾಗದು ನೀರನು|
ಕುಡಿವ ಜಲವನು ಹಾಳು ಮಾಡದೆ
ನೀಗಬಹುದಿದೆ ತೃಷೆಯನು||

-ಅಶ್ವತ್ಥನಾರಾಯಣ, ಮೈಸೂರು
*****