ಅನುದಿನ ಕವನ-೪೪೮, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಕತ್ತಲಾಗುವುದರೊಳಗೆ ನಿನ್ನನು ನೋಡಬೇಕು ಒಮ್ಮೆ
ನೆರಳು ಕರಗುವುದರೊಳಗೆ ಜೊತೆಯಾಗಬೇಕು ಒಮ್ಮೆ

ಉಸಿರ ಹಣತೆಯೋ ಹೊಯ್ದಾಡುತಿದೆ ಚಣಕೊಮ್ಮೆ
ಗಾಳಿ ಸುಳಿವುದರೊಳಗೆ ನಿನಗಾಗಿ ಬೆಳಗಬೇಕು ಒಮ್ಮೆ

ದಿಟ್ಟಿಯ ಚಿಟ್ಟೆ ರೆಕ್ಕೆಯರಳಿಸುವುದೋ ಇಲ್ಲವೋ
ಹಾರುವ ಮುನ್ನ ನಿನ್ನಂತರಂಗದಿ ಕೂರಬೇಕು ಒಮ್ಮೆ

ಕಾಯುವಿಕೆಯ ಮೊಂಬತ್ತಿ ಕರಗುತಿದೆ ಬಲುಬೇಗ
ಕುಡಿ ಆರುವುದರೊಳಗೆ ನಿನ್ನನು ಕಾಣಬೇಕು ಒಮ್ಮೆ

ಸಿದ್ಧನ ಪ್ರತಿ ಗಜಲೊಳು ಅಡಗಿಹುದು ನಿನ್ನ ಪ್ರೇಮ
ಪದ ಮೌನವಾಗುವ ಮುನ್ನ ನೀನು ಹಾಡಬೇಕು ಒಮ್ಮೆ


-ಸಿದ್ಧರಾಮ ಕೂಡ್ಲಿಗಿ
*****