ದುಭಾಷಿ
ನನ್ನ ಮನೆಯೊಳಗೇ ನಾನೀಗ ಅನಾಥ, ನಾನೇ ಕಟ್ಟಿದ ಮನೆಯ ಸೂರು ನನ್ನನೇ ದೂರುತಿಹುದು
ನಾ ಅಣ್ಣನೆಂದು ಬಗೆದ
ನನ್ನನು ಅಣ್ಣನೆಂದ ಕಿರಿಯನ
ಮಧ್ಯೆ ದುಭಾಷಿಯೊಬ್ಬ
ಕೆಲಸ ಮಾಡುತ್ತಿದ್ದಾನೆ
ಅವನ ಹೃದಯ ಬಡಿತ
ನನ್ನ ಹೃದಯದಂತೆಯೇ ಕೇಳುತ್ತಿದೆ
ಸಂಸ್ಕರಿಸಿದ ಮನುಜ ಭಾಷೆಯಿದು
ಲಬ್ ಡಬ್ ಲಬ್ ಡಬ್
ಮೃದು ಮಧುರ ಪ್ರೀತಿ
ಮಿಡಿಯುವ ಮೊದಲು
ದುಭಾಷಿ ಸತ್ಯವ ತಿರುಚಿ,ಕಿರುಚಿ
ವಿರೂಪವ ಜಗಕೆ ದಿಗ್ದರ್ಶಿಸುತಿಹನು
ಜಾತಿ ಭಾಷೆ ಇಲ್ಲದ
ಸತ್ಯ ಕಿರುಚುವುದಿಲ್ಲ
ಕವಿತೆಯಂತೆ ಧ್ವನಿ ಕ್ಷೀಣವಾದರೂ
ಜೀವಪರ ಸಂಕೇತ ಕೂಡ
-ಮಹಮ್ಮದ್ ರಫೀಕ್, ಕೊಟ್ಟೂರು
*****