ಜೋಡಿ ಪಯಣ
ಸಂಜೆ ಪಯಣದ ದಾರಿಯಲ್ಲಿ
ಯಾರಿಲ್ಲದಿದ್ದರೂ ಜೊತೆಯಲ್ಲಿ
ನಿನಗೆ ನಾನು ನನಗೆ ನೀನು !
ಮುಂದಿನ ದಾರಿ ಗೊತ್ತಿಲ್ಲ
ಗುರಿಯೂ ತಿಳಿದಿಲ್ಲ
ಪಯಣದುದ್ದಕ್ಕೂ ಜೊತೆಯಿರುವೆ ನಾನು
ಇಷ್ಟು ಸಾಕಲ್ಲವೇನು ?
ಮೈಯಲ್ಲಿ ಕಸುವಿಲ್ಲ, ಕೈಯಲ್ಲಿ ಕಸುಬೂ ಇಲ್ಲ
ಒಡಹುಟ್ಟು ಜನ್ಮದಾತರೂ ಇಲ್ಲ !
ಕರುಳ ಕುಡಿಗಳು ಹಬ್ಬಿವೆ ಇನ್ನೆಲ್ಲೋ ?
ಅಗ್ನಿ ಸಾಕ್ಷಿಯ ಮುಂದೆ ಕೈ ಹಿಡಿದೆ ನೀನು
ನಿನ್ನನೆಂದಿಗೂ ಕೈ ಬಿಡೆನು ನಾನು !
ಈ ಜನ್ಮವಷ್ಟು ಪ್ರೀತಿಸೋಣ
ಮುಂದಿನ ಜನ್ಮ ಕಂಡವರಾರು ?
ವೈಭವ ಸಿರಿತನ ಅರಮನೆಯವರಿಗೆ
ಪ್ರೀತಿ ಹೃದಯ ನಮ್ಮಂಥವರಿಗೆ !
ಎಲ್ಲಿಂದಲೋ ಬಂದು ಜೊತೆಯಾದೆವು
ಜೊತೆಯಾಗಿಯೇ ನಡೆದೆವು
ಪ್ರೇಮ ದಾಖಲೆಗಳಲ್ಲಿ ಇಲ್ಲ ನಮ್ಮ ಹೆಸರು
ಜೊತೆಯಾಗಿಯೇ ಕೊನೆಯಾಗಲಿ ಉಸಿರು !
– ವೈಲೆಟ್ ಪಿಂಟೋ, ಕುಂದಾಪುರ
*****