ಸಾಹಿತಿ ರಹೊಬ ಕಣ್ಣಲ್ಲಿ ಮನಂ ಐಪಿಎಸ್

ಅಪರೂಪದ ಸಾಹಿತಿ ಮತ್ತು ಸಂಶೋಧಕ ಪೊಲೀಸ್ ಅಧಿಕಾರಿ ಎಂ.ನಂಜುಂಡಸ್ವಾಮಿ (ಮನಂ)

ಅದೊಂದು ದಿನ ಹಿರಿಯ ಪೊಲೀಸ್ ಅಧಿಕಾರಿಗಳೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದೆ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಂಜೆ ಅವರ ಮನೆಯಲ್ಲಿ ದೊಡ್ಡ ಪಾರ್ಟಿ ನಡೆಯುವುದಿತ್ತು. ಅದಕ್ಕಾಗಿ ಕೇಕ್ ಮತ್ತು ಇನ್ನಿತರ ಖಾದ್ಯಗಳ ತಯಾರಿ ನಡೆದಿತ್ತು. ಹಾಗೆ ಅವರ ಜೊತೆ ಮಾತನಾಡುತ್ತಾ ಗೇಟ್ ಬಳಿ ನಿಂತಿರಬೇಕಾದರೆ ಅಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಬಂದರು. ಬಂದವರೆ ಹಿರಿಯ ಆ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯುಟ್ ಹೊಡೆದರು. ಲೋಕಲ್ ಬೀಟ್ ಮೇಲೆ ಕರ್ತವ್ಯದ ಮೇಲಿದ್ದ ಪೊಲೀಸರು ಅವರು. ಆಶ್ಚರ್ಯವೆಂದರೆ ಸೆಲ್ಯೂಟ್ ಹೊಡೆದ ಆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಆತ್ಮೀಯವಾಗಿ ಮಾತನಾಡಿಸಿದ ಆ ಹಿರಿಯ ಅಧಿಕಾರಿಗಳು ತಮ್ಮ ಅವರೊಂದಿಗಿನ ಮಾತಿನ ಉದ್ದಕ್ಕೂ ಅವರಿಬ್ಬರು ಪೊಲೀಸರನ್ನು “ಸರ್” ಎಂದೇ ಸಂಬೋಧಿಸುತ್ತಿದ್ದರು! ಹಾಗೆ ಆ ಇಬ್ಬರಿಗೂ ಕೇಕ್ ಮತ್ತು ಇತರೆ ತಿನಿಸು ಕೊಟ್ಟ ಅವರು ಇಬ್ಬರಿಗೂ “ದೇವರು ನಿಮಗೆ ಒಳ್ಳೆಯದು ಮಾಡಲಿ, ಹೋಗಿ ಬನ್ನಿ ” ಎಂದು ಹರಸಿ ಕಳುಹಿಸಿದರು. ಅಲ್ಲದೇ ನನಗೂ ಕೂಡ ಹೀಗೆ ಇತರರನ್ನು ಗೌರವಿಸುವುದರ ಬಗ್ಗೆ ಇನ್ನಷ್ಟು ವಿಚಾರ ಅಂದು ತಿಳಿಸಿಕೊಟ್ಟರು.
ಅಂದಹಾಗೆ ಹೀಗೆ ತನ್ನ ಕಿರಿಯ ಸಿಬ್ಬಂದಿಗೆ ಎಲ್ಲಾ ಪ್ರೊಟೊಕಾಲ್ ಮೀರಿ ಗೌರವ ಮತ್ತು ಪ್ರೀತಿ ಕೊಟ್ಟ ಆ ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ಬೇರೆ ಯಾರು ಅಲ್ಲ, ಹಾಲಿ ಎಡಿಜಿಪಿ ಎಂ.ನಂಜುಂಡಸ್ವಾಮಿ ಐಪಿಎಸ್ ಅವರು. ಎಲ್ಲರ ಪ್ರೀತಿಯ ಮನಂರವರು.


ಹೌದು, ಮನಂ (ಮಳವಳ್ಳಿ ನಂಜುಂಡಸ್ವಾಮಿ) ಹೃದಯವಂತ ಪೊಲೀಸ್ ಅಧಿಕಾರಿ. ಅವರ ಪೊಲೀಸ್ ಅಧಿಕಾರ ವ್ಯಾಪ್ತಿ, , ವೃತ್ರಿ, ಕರ್ತವ್ಯ ಮತ್ತು ಸಾಧನೆಗಳ ಬಗ್ಗೆ ಅವರು ಎಂದೂ ನನಗೆ ಅಷ್ಟಾಗಿ ತಿಳಿಸಿಲ್ಲ‌. ಆದರೆ ಓರ್ವ ಸಾಹಿತಿಯಾಗಿ, ಕವಿಯಾಗಿ, ಬರಹಗಾರನಾಗಿ, ತಳ ಸಮುದಾಯಗಳ ಇತಿಹಾಸ ದಾಖಲಿಸುವವರಾಗಿ, ಪಾಪ್ ಹಾಡುಗಾರರಾಗಿ, ಸಮಾಜಕ್ಕೆ ತಮ್ಮ ಇಂಗ್ಲಿಷ್ ಮತ್ತು ಕನ್ನಡ ಚುಟುಕು ಬರಹಗಳ ಮೂಲಕ ಸಮಾಜ ಮತ್ತು ದೇಶವನ್ನು ಎಚ್ಚರಿಸುವವರಾಗಿ ಅವರು ನನಗೆ ಮಾತ್ರವಲ್ಲ ಇವರನ್ನು ಬಲ್ಲ ಎಲ್ಲರಿಗೂ ಪರಿಚಿತರು.
ಮತ್ತೊಂದು ಮಾತು, ಎಲ್ಲರೂ ಪ್ರತಿಭೆ ಪ್ರತಿಭೆ ಎನ್ನುತ್ತಾರೆ. ಆದರೆ ಶೋಷಿತ ಸಮುದಾಯಗಳ ಪ್ರತಿಭೆಗಳ ಬಗ್ಗೆ ಕೊಂಕು ಮಾತನಾಡುತ್ತಾರೆ. ಶೋಷಿತ ಸಮುದಾಯಗಳ ನಡುವೆ ಬಂದಿರುವ ಎಂ.ನಂಜುಂಡಸ್ವಾಮಿ ಅವರು ಡಾ.ಎಂ.ಎಂ.ಕಲಬುರ್ಗಿ, ಷ.ಶೆಟ್ಟರ್, ಡಾ.ಎಂ.ಚಿದಾನಂದಮೂರ್ತಿ… ಹೀಗೆ ಹಿರಿಯ ಸಂಶೋಧಕರ ಸಾಲಿನಲ್ಲಿ ನಿಲ್ಲಬಲ್ಲಂತಹ ಅಪರೂಪದ ಪ್ರತಿಭಾವಂತರು. ರಾವಣನಿಗೆ ಹತ್ತು ತಲೆ ಇತ್ತು ಅಂತಾರೆ ಅದೆಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಎಂ.ನಂಜುಂಡಸ್ವಾಮಿ ಅವರಿಗೆ ಹತ್ತು ಮೆದುಳಿರುವುದಂತು ನಿಶ್ಚಿತ. ಇದು ಅತಿಶಯೋಕ್ತಿ ಎನಿಸಬಹುದು ಆದರೆ ಅವರ ಮಾತು, ಕೃತಿ, ಬರವಣಿಗೆ ನೋಡಿದಾಕ್ಷಣ ಹತ್ತು ಮೆದುಳಿನ ಈ ಮಾತು ಸತ್ಯವೆನಿಸದಿರದು‌.


ಮನಂ ಅವರ “ಭಾರತದ ಮೊದಲ ದೊರೆಗಳು”, “ಹೊಲೆಯ ಮಾದರ ರಾಜರು”, “ಕೊಸವೊ ಜಾಣರು ಕತೆಗಳು”, ಅವರು ಸಂಪಾದಿಸಿದ “ಛಲವಾದಿ ಗಂಟೆ ಬಟ್ಟಲುಗಳು” ಅಧ್ಯಯನ ಕೃತಿ ಮತ್ತು ಈಚಿನ ಅವರ ಚೊಚ್ಚಲ ಕವನ ಸಂಕಲನ “ಮನದೊಳಿರಲಾರದ ಕಾವ್ಯ ಕನ್ನಿಕೆ” ಅಂತಹ ಅವರ ಅಪಾರ ಪ್ರತಿಭೆ ಮತ್ತು ಜ್ಞಾನದ ಪ್ರತಿಬಿಂಬಗಳು.
ನನಗೆ ತಿಳಿದಂತೆ ಅನೇಕರು ವಿಶ್ವವಿದ್ಯಾನಿಲಯಗಳಲ್ಲಿ ಹಾಲಿ ದೊಡ್ಡ ದೊಡ್ಡ ಸಂಶೋಧಕರು ಎಂದು ಕರೆಸಿಕೊಳ್ಳುತ್ತಾರೆ. ಆದರೆ ನಿಜವಾದ ಸಂಶೋಧಕರು ಎಂ ನಂಜುಂಡಸ್ವಾಮಿ ಅವರು. ಇವರ ಮನೆಯ ಮೇಲಿನ ಮಹಡಿಯಲ್ಲಿ ಅವರು ನಿರ್ಮಿಸಿರುವ ಬೃಹತ್ ವೈಯಕ್ತಿಕ ಗ್ರಂಥ ಭಂಡಾರ, ಅಲ್ಲಿ ಸಂಗ್ರಹಿತವಾಗಿರುವ ಪುಸ್ತಕಗಳು, ಆಕರ ಗ್ರಂಥಗಳು… ಯಾರಿಗಾದರೂ ಅವುಗಳನ್ನು ನೋಡಿದಾಗ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಗ್ರಂಥ ಭಂಡಾರ ಹೀಗೆ ಇತ್ತಾ ಎಂಬ ಪರಿಕಲ್ಪನೆ ಮೂಡಿಸಿದರೂ ಅಚ್ಚರಿ ಎನಿಸದು.
ಒಂದು ವಾಸ್ತವ, ಜ್ಞಾನಿಗಳು ಬರುತ್ತಾರೆ ಜ್ಞಾನಿಗಳು ಹೋಗುತ್ತಾರೆ ಆದರೆ ಅಂತಹ ಜ್ಞಾನಿಗಳನ್ನು, ಅವರ ಸೇವೆಯನ್ನು ಈ ದೇಶ, ಈ ಸಮಾಜ ಜಾತ್ಯತೀತವಾಗಿ ಬಳಸಿಕೊಳ್ಳುವ, ಗೌರವಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಗೌರವ ಮತ್ತು ಮೆಚ್ಚುಗೆಗಳು ಇಂತಹವರಿಗೆ ಸಲ್ಲದೆ ಬೇರೆಯವರಿಗೆ, ಏನೇನು ಪ್ರತಿಭೆ ಇಲ್ಲದವರಿಗೆ ಸಲ್ಲುತ್ತವೆ. ಮನಂರವರಿಗೆ ನಮ್ಮ ವ್ಯವಸ್ಥೆ ಸೂಕ್ತ ಗೌರವ ಸಲ್ಲಿಸಬೇಕು, ಅವರ ಜ್ಞಾನ ಮತ್ತು ಕರ್ತವ್ಯದ ಅನುಭವವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದನ್ನು ಕಲಿಯಬೇಕು.


ಅಂದಹಾಗೆ ಇಂದು ಮನಂ ಅವರ ಹುಟ್ಟು ಹಬ್ಬ. ಜನ್ಮದಿನದ ಖುಷಿಯ ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಕೆಗಳು. ಈ ನಿಟ್ಟಿನಲ್ಲಿ ಅವರಿಂದ ಇನ್ನಷ್ಟು ಕೃತಿಗಳು ಬರಲಿ, ಮಹತ್ವದ ಸಂಶೋಧನೆಗಳು ಸಿಗಲಿ, ಹಾಗೆ ಈ ಸಮಾಜ ಅವರನ್ನು ಮತ್ತಷ್ಟು ಗುರುತಿಸಲಿ, ಗೌರವಿಸಲಿ, ಕರ್ತವ್ಯದ ಅವಕಾಶ ನೀಡಲಿ ಎಂಬುದು ನನ್ನಂತಹವರ ಕಳಕಳಿ.

-ರಘೋತ್ತಮ ಹೊ.ಬ, ಮೈಸೂರು
*****