ಅನುದಿನ ಕವನ-೪೫೨, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಕರೆದವನ ಕಾಣುತ್ತಾ ನಿಂತ ಕಾವ್ಯಕನ್ನಿಕೆ

ಕರೆದವನ ಕಾಣುತ್ತಾ ನಿಂತ ಕಾವ್ಯಕನ್ನಿಕೆ

ಕರೆ ಮಾಡಿದ ನಲ್ಲನ ದನಿ ಕೇಳುತ್ತಾ,
ಒಲವ ದನಿಯ ಆತನಿಗೆ ಉಣಬಡಿಸುತ್ತಾ,
ನಿಂತಿಹಳು ನಾರಿ ನಸುನಾಚಿ
ಸಿರಿ ಮೈ ತೋರುತ್ತಾ.

ನಲ್ಲನ ಕಣ್ಣಿಗೆ ಸಿಲುಕದೆ ಆತನ ಕರೆಗೆ,
ಕರಗಿ ಮೈಯೆಲ್ಲಾ ಪುಳಕದಿ ನೀರಾಗುತ್ತಾ,
ನಿಂತಿಹಳು ಪೋರಿ
ಬಿಸಿ ಉಸಿರ ಬಿಡುತ್ತಾ.

ಮೆಲ್ಲನೆ ಕಿಟಕಿಯ ಸಂಧಿಯಿಂದ ಮನವ ಹರಿಸಿ,
ಬರುತ್ತಿರುವವನ ಕೈಯೊಳಗಿನ ಹೂಗಳತ್ತಾ,
ನಿಂತಿಹಳು ಚೋರಿ
ಪರಿಮಳವ ಹೀರುತ್ತಾ.

ತನ್ನ ಹುಡುಕುತ್ತಿರುವವನ ತಳಮಳವ,
ಪ್ರೆಮದಾಟದಲ್ಲಿ ನಿಧಾನವಾಗಿ ಹೆಚ್ಚಿಸುತ್ತಾ,
ನಿಂತಿಹಳು ತನ್ನನ್ನುಕಾಣಲು
ಹಾತೊರೆವವನ ಕಾಣುತ್ತಾ.

ಬರುತ್ತಿವವನು ಬಂದು ತನ್ನ ಕಂಡ ಮೇಲೆ,
ಮತ್ತೆ ಎಲ್ಲೂ ಹೋಗದಂತೆ ತಡೆ ಹಾಕುತ್ತಾ,
ನಿಂತಿಹಳು ಸುಂದರಿ
ತನ್ನ ತಾನೇ ಅವನಿಗೆ ಒಪ್ಪಿಸುತ್ತಾ.


– ಮನಂ