ಅನುದಿನ ಕವನ-೪೫೩, ಕವಯತ್ರಿ: ವಸು ವತ್ಸಲೆ, ಬೆಂಗಳೂರು

ಮನಸ್ಸು ಮರ್ಕಟಿಗರ
ಸಂತೆಯಲಿ ಮಾರಾಟಕ್ಕಿದೆ….
ಬದುಕು ಯಾರದೋ
ದರ್ದಿಗೆ ಬಿಕರಿಯಾಗಿದೆ…

ನಾಳೆ ಅರಳ ಬೇಕಿರುವ
ಮನಗಳು ಇಂದೇ ಹಾಳಾಗುತ್ತಿವೆ!
ಯಾರು ಬಿತ್ತಿದರೋ ವಿಷದ ಬೀಜ
ಮೊಳೆವ ಮುನ್ನ ಚಿವುಟಬೇಕಿದೆ

ಈಗಿದ್ದವರು ಇಂದಿಲ್ಲ
ನಾಳೆ ನಂಬಿಕೆಯಷ್ಟೇ….
ತಲೆಯ ಮೇಲಿನ ಹಿಜಾಬು
ತಲೆ ಕಾಯುವುದಿಲ್ಲ….
ಹೆಗಲ ಮೇಲಿನ ಕೇಸರಿ ಶಾಲು
ಬುತ್ತಿ ಗಂಟಾಗುವುದಿಲ್ಲ….

ಯಾರದೋ ಬೆಂಕಿಯ ಕಿಡಿಗೆ
ಬೆರಳೇಕೆ ಹಿಡಿವೆ ತಮ್ಮ?
ಅವರಾರದೋ ಬಡಿವಾರಕೆ
ನಿನ್ನ ಬಲಿ ಏಕೆ ಹೇಳಮ್ಮ?
ಸರಸತಿಯ ಮಂದಿರದಲಿ
ಎಲ್ಲರೂ ಒಂದೇ ಮರೆವುದೇಕೆ?

ಹೊತ್ತಿಗೆ ಹೊರುವ ಭಾರಕೆ
ಧರ್ಮವ ಕಾಯುವ ಹೊಣೆ ಬೇಕೆ?
ಸಾಕಿಷ್ಟು ಹೆತ್ತವರ ಕನಸ ಹೊತ್ತು
ಉಳಿದೆಲ್ಲ ಕೊಳೆಯ ಜಾಡಿಸಿ
ಓದಿ, ದೇಶಕೆ ಕೊಡುಗೆಯಾಗು…ಸಾದಿಸಿ….

-ವಸು ವತ್ಸಲೆ, ಬೆಂಗಳೂರು