ಅಕ್ಷರವೇ ಬರದ ನಿನ್ನೆದುರು
ನಾನೊಂದು ಮಹಾಕಾವ್ಯವನ್ನೇ ತೆರೆದಿಟ್ಟಿದ್ದೆ.
ವಿದ್ವಾಂಸರೂ ನಾಚುವಂತೆ ನೀನು ಓದುತ್ತಲೇ ಹೋದೆ.
ಮುಖಪುಟವ ಹಿಡಿದು
ಮೊದಲಿಗೆ ಮುತ್ತಿಟ್ಟೆ ಮೂಗಿನ ತುದಿಗೆ
ಪೀಠಿಕೆಯಲ್ಲೆ ನಿಂತಿದ್ದೆ ಒಂದು ಗಳಿಗೆ.
ಕತ್ತಿನ ಇಳಿಜಾರಿನಗುಂಟ
ನಿನ್ನ ಬಿಸಿಯುಸಿರಿನಿಂದುರಿದುವು ನೂರೆಂಟು ಕವಿತೆಗಳು..
ಕಟ್ಟಿದ ತುರುಬಿಗೆ ಕೈಯಿಟ್ಟು ಕೆದರಿದ್ದೆ
ಪದಗಳನ ತಡಕಿದ್ದೆ ಮೈಮರೆಯುವಂತೆ
ತುಂಬಿದೆದೆಯ ಮೇಲೆ ತುಟಿಗಳಿಂದ
ಗೀಚುತ್ತಲೇ ಇದ್ದೆ ಸಂಜೆವರೆಗೆ…
ಮೈಯ ಪುಟಪುಟದ ತುಂಬ
ಕೈಬೆರಳಿನಿಂದರಳಿದ ಚಿತ್ತಾರಗಳ
ನುರಿತ ಕಲಾವಿದನೂ ವಿಮರ್ಶಿಸಲಾರ..
ಬಿಳಿಹಾಳೆಯೆಲ್ಲಾ ಸಂಜೆರಂಗಿನ
ಸೊಬಗಿಗೆ ನಾಚಿ ಕೆಂಪಾಗಿತ್ತಲ್ಲ!
ಓದುತ್ತಲೇ ಇದ್ದೆ,
ಬರೆದವರೂ ದಿಕ್ಕುತಪ್ಪುವಂತೆ..
ನಡುಬಳಸಿದ ಒಡ್ಯಾಣ
ಪುಸ್ತಕದೊಳಗಿದ್ದ ನವಿಲುಗರಿಯಂತೆ
ಸದ್ದಿಲ್ಲದೇ ಕಳಚಿಬಿತ್ತೇ?
ಎದೆಯ ಶಿಖರದಿಂದ ಕೆಳಗಿಳಿದ
ತುಟಿಗಳಿಗೀಗ
ಕೊನೆಯ ಪುಟಗಳನ್ನೋದುವ ತವಕ..
ಎಳೆಎಳೆಯಾಗಿ ಬಿಚ್ಚಿಕೊಂಡು
ಗುನುಗುನಿಸುತ್ತಾ ಹೋದೆ..
ಮತ್ತಿನಲ್ಲೇ ನಕ್ಕಳು ಕಾವ್ಯಕನ್ನಿಕೆ!
ರಭಸವಾಗಿ ಹರಿದ ನದಿ
ಸೇರುತ್ತಲೇ ಇತ್ತು ಕಡಲಿಗೆ
ನೀನು ಅಲೆಯಂತೆ ಅಪ್ಪಳಿಸುತ್ತಲೇ ಹೋದೆ
ಅಡಿಗಡಿಗೆ..!
ನಿನ್ನ ತೆಕ್ಕೆಯೊಳಗಿನ ಕಾವ್ಯವನ್ನು
ಓದುವುದರಲ್ಲೆಷ್ಟು ಮಗ್ನ ನೀನು?
ಸುತ್ತಿಬಳಸಿ ಮೊದಲಪುಟದಿ
ಮತ್ತೆ ಮುತ್ತು ಕದಿವುದೇನು?
ರಂಗೇರಿದ ಕದಪು, ಬಿಸಿಯೇರಿದ ತನುವು, ಬಿಚ್ಚಿಕೊಂಡ ಹೆರಳು, ಕೆನ್ನೆಗಿಳಿದ ಕಾಡಿಗೆ, ಉದುರಿಬಿದ್ದ ಮಲ್ಲಿಗೆ
ಗುಟ್ಟು ಬಿಟ್ಟುಕೊಡಲಾರವೇನು?
ಓದಲಾರೆಯೆಂದು ಕೆಣಕಿ ಸೋತುಹೋದ ತರುಣಿ
ಲೋಕ ಹೀಗೆ ಕರೆದುಬಿಟ್ಟರೇನು?
ಸೋಲಲೆಂದೇ ಕೆಣಕಿ
ತಣಿದು,ಒಲಿದು,ವಶವಾದ ಕಾವ್ಯವ ಮತ್ತೊಮ್ಮೆ ಓದಬಾರದೇನು?
-ಸುಹಾಸಿನಿ, ಬೆಂಗಳೂರು
*****